ಮಳೆಗಾಲ ಪೂರ್ವದಲ್ಲಿ ಸಣ್ಣ ಜಲಮೂಲಗಳ ದುರಸ್ತಿ ಪೂರ್ಣಗೊಳಿಸಿ : ಸಿಇಒ ವೈಶಾಲಿ

ಶಿವಮೊಗ್ಗ, ಎ. 22 : ಮುಂಗಾರು ಮಳೆ ಆರಂಭವಾಗುವ ಮೊದಲೇ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲಾ ಕೆರೆ ಕುಂಟೆ, ಗೋಕಟ್ಟೆ, ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಗರಿಷ್ಟ ಸಂಗ್ರಹವಾಗಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಲಶಕ್ತಿ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿದರು. 
ಜಿಲ್ಲೆಯಲ್ಲಿ ಜಲಶಕ್ತಿ ಯೋಜನೆಯಡಿ ಕೈಗೊಳ್ಳಬಹುದಾದ ಸಾಂಪ್ರದಾಯಿಕ ನೀರಿನ ಸಂಗ್ರಹಣಾ ವ್ಯವಸ್ಥೆಗಳ ಬಗ್ಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವರದಿ ನೀಡಿದೆ. ಇದರಂತೆ 60ಕಲ್ಯಾಣಿ, 230 ಕುಂಟೆ, 212 ಗೋಕಟ್ಟೆ, 337 ಕಟ್ಟೆ ಸೇರಿದಂತೆ ಒಟ್ಟು 839 ಸಾಂಪ್ರದಾಯಿಕ ನೀರಿನ ಸಂಗ್ರಹಣಾ ವ್ಯವಸ್ಥೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಯೋಜನೆಯಡಿ ಬದು ನಿರ್ಮಾಣ, ಕಲ್ಯಾಣಿ ಪುನಶ್ಚೇತನ, ನಾಲಾ ಪುನಶ್ಚೇತನ, ಗೋಕಟ್ಟೆ ನಿರ್ಮಾಣ, ಮಲ್ಟಿ ಆರ್ಚ್ ಚೆಕ್‍ಡ್ಯಾಂ, ಚೆಕ್‍ಡ್ಯಾಂ ಹೂಳು ತೆಗೆಯುವ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಅವರು ಸೂಚಿಸಿದರು.
ರೈತರು ತಮ್ಮ ಬೋರ್‍ವೆಲ್‍ಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ರಿಚಾರ್ಜ್ ಮಾಡಬಹುದಾಗಿದ್ದು, ಈ ಕುರಿತು ರೈತರಿಗೆ ತಾಂತ್ರಿಕ ನೆರವು ಒದಗಿಸಬೇಕು. ಮೇ ಅಂತ್ಯದ ಒಳಗಾಗಿ ಕನಿಷ್ಟ ಒಂದೂವರೆ ಲಕ್ಷ ಬೋರ್‍ವೆಲ್ ರಿಚಾರ್ಜ್ ಮಾಡಲು ನೆರವು ಒದಗಿಸಬೇಕು. ಪ್ರತಿ ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಬೇಕು ಎಂದರು.
ದೊಡ್ಡ ಕೆರೆಗಳ ಕಾಮಗಾರಿ ಕೈಗೊಳ್ಳುವ ಬದಲು ಸಣ್ಣ ನೀರಿನ ಮೂಲಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಈ ನಿಟ್ಟಿನಲ್ಲಿ ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಯೋಜನೆಯಲ್ಲಿ ನಿಗದಿತ ಪ್ರಗತಿ ಸಾಧಿಸದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಅವರು ಸೂಚನೆ ನೀಡಿದರು.