ಮಳೆಗಾಲ ಆರಂಭವಾಗುತ್ತಿರುವದರಿಂದ ಯಾವುದೇ ಜನ ಹಾಗೂ ಜಾನುವಾರುಗಳ ಜೀವ ಹಾನಿಯಾಗದಂತೆ ಮುಂಜಾಗ್ರತೆವಹಿಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ, ಜೂ.15: ಮಳೆಗಾಲ ಆರಂಭವಾಗುತ್ತಿರುವದರಿಂದ ಬೀದರ ಜಿಲ್ಲೆಯಲ್ಲಿ ಯಾವುದೇ ಜನ ಹಾಗೂ ಜಾನುವಾರುಗಳ ಜೀವ ಹಾನಿಯಾಗದಂತೆ ಮುಂಜಾಗೃತೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಣೆ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಹಳ್ಳಿಗಳ ಬ್ರೀಜ್‍ಗಳ ಮೇಲೆ ನೀರು ಬಂದಾಗ ಮುಂಚಿತವಾಗಿ ಜನರಿಗೆ ಮಾಹಿತಿಯನ್ನು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿ.ಡಿ.ಓ ಮತ್ತು ಗ್ರಾಮ ಸೇವಕರು ಜನರಿಗೆ ಮಾಹಿತಿಯನ್ನು ನೀಡಬೇಕು ಅಥವಾ ಅಂಥಹ ಸ್ಥಳಗಳಲ್ಲಿ ಎಚ್ಚರಿಕೆ ಬೊರ್ಡಗಳನ್ನು ಹಾಕಬೇಕು ಇದ್ದರಿಂದ ಮುಂದೆಯಾಗುವ ಹಾನಿಯನ್ನು ತಪ್ಪಿಸಬಹುದು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಕಾರಣಕ್ಕೆ ತಮ್ಮ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಬಾರದು ಎಂದು ಹೇಳಿದರು.

ನಗರಗಳಲ್ಲಿ ಮಳೆ ಬಂದಾಗ ನೀರು ಬಂದಾಗ ರಸ್ತೆಗಳಲ್ಲಿ ನೀರು ನಿಂತು ರಸ್ತೆಬ್ಲಾಕ್ ಆಗುತ್ತವೆ ಮುಂಚಿತವಾಗಿ ಚರಂಡಿಗಳನ್ನು ಸ್ವಚ್ಚ ಮಾಡಿದರೆ ಈ ಸಮಸ್ಯ ಮಳೆಗಾಲದಲ್ಲಿ ಉಂಟಾಗುವದಿಲ್ಲ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಮಾಡಿರುವದರಿಂದ ಅಲ್ಲಿ ಜೀವ ಹಾನಿಯಾಗಿದ್ದು, ಅಂಥಹ ಯಾವುದೇ ಘಟನೆಗಳು ನಮ್ಮ ಜಿಲ್ಲೆಯಲ್ಲಿ ನಡೆಯಬಾರದು ಈ ಕುರಿತು ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು ಮತ್ತು ಇಓ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕೆಂದರು.

ಮಳೆಗಾಲದಲ್ಲಿ ನೀರು ಕಲುಷಿತವಾಗಿ ಬರುವದರಿಂದ ಅದನ್ನು ಸರಿಯಾಗಿ ಫಿಲ್ಟರ್ ಮಾಡಿ ಜನರಿಗೆ ಕೊಡಬೇಕು ಮತ್ತು ಪ್ಲೋರಿನ್ ಹಾಗೂ ಆಲಂ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಘಟನೆ ಸಂಭವಿಸಿದಾಗ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ನಿಖರವಾದ ವರದಿಯನ್ನು ತಮ್ಮ ಮೇಲಾಧಿಕಾರಿಗಳಿಗೆ ನೀಡಬೇಕು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳುವದರ ಜೊತೆಗೆ ಅದರ ಅಕ್ಕ-ಪಕ್ಕದ ಕಾಂಪೌಂಡಗಳಲ್ಲಿ ಯಾವುದೇ ಕಸವನ್ನು ಸಾರ್ವಜನಿಕರು ಎಸೆಯದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಮಾತನಾಡಿ ಮಳೆಗಾಲದಲ್ಲಿ ಯಾವುದೇ ತೊಂದರೆಯಾದರೆ ಸಾರ್ವಜನಿಕರು ಪೋಲಿಸ್ ಸಹಾಯವಾಣಿ 112 ಗೆ ಸಂಪರ್ಕಿಸಬಹುದಾಗಿದೆ ಕೇವಲ 11 ನಿಮಿಷದಲ್ಲಿ ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ಬಂದು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಮಳೆಗಾಲದಲ್ಲಿ ಹೆಚ್ಚಿನ ಸಾಂಕ್ರಾಮಿಕ ರೋಗಗಳು ಬರುವದರಿಂದ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ಮಾತನಾಡಿ ಜಿಲ್ಲೆಯ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ರಾಯಚೂರಿನಂತಹ ಘಟನೆ ನಮ್ಮ ಜಿಲ್ಲೆಯಲ್ಲಿ ಸಂಭವಿಸಬಾರದು ಕುಡಿಯುವ ನೀರಿನ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಬೇಕು ಕೆಲವು ಕಡೆ ತೆರೆದ ಬಾವಿಗಳಿದ್ದು, ಅವುಗಳ ನೀರು ಸ್ವಚ್ಚವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಪಿ.ಡಿ.ಓ ಸೇರಿದಂತೆ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸಬೇಕೆಂದರು.

ಎನ್.ಡಿ.ಆರ್.ಎಫ್ 10ನೇ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಪ್ರದೀಪ್ ಕುಮಾರ ಮಾತನಾಡಿ ಬೀದರ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಲವಾರು ಅಣಕು ಪ್ರದರ್ಶನದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು. ಪ್ರವಾಹ, ರಸ್ತೆ ಅಪಘಾತ, ಹೃದಯಾಘಾತ, ಭೂಕಂಪನ ಮತ್ತು ಬೆಂಕಿ ಹತ್ತಿದಾಗ ತೆಗೆದುಕೊಳ್ಳುವ ಮುಂಜಾಗ್ರತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದ್ದರಿಂದ ಸಾರ್ವಜನಿಕರ ಹಲವಾರು ಪ್ರಾಣಗಳನ್ನು ಉಳಿಸಬಹುದಾಗಿದೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ರಮೇಶ ಕೋಲಾರ, ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು, ಇ.ಓ.ಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಆಗ್ನಿಶಾಮಕ ದಳದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.