ಮಳೆಗಾಲದ ಆರೈಕೆ

ಮಳೆಗಾಲ ಶುರುವಾಗುತ್ತಿದೆ ನಾನಾ ಬಗೆಯ ರೋಗರುಜಿನಗಳ ಜೊತೆ ಚರ್ಮದ ಸೋಂಕು ಕೂಡ ಈ ಋತುವಿನಲ್ಲಿ ಬಾಧಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಇಂತಹ ಸಮಯದಲ್ಲಿ ರಾಸಾಯನಿಕಗಳಿರುವ ಪ್ರಸಾಧನಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ವಿಧಾನವನ್ನು ನಿಮ್ಮದಾಗಿಸಿಕೊಂಡು ಸೌಂದರ್ಯವನ್ನು ಇನ್ನಷ್ಟು ವರ್ಧಿಸಬಹುದಾಗಿದೆ. ಅಂತೆಯೇ ಆಯಾಯ ಕಾಲಕ್ಕೆ ಅನುಸಾರವಾಗಿ ನಿಮ್ಮ ಸೌಂದರ್ಯದ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
ಈ ಋತುವಿನಲ್ಲಿ ತೇವಾಂಶವು ಅಧಿಕವಾಗಿರುತ್ತದೆ ಮತ್ತು ಇದು ತ್ವಚೆಯ ರಂಧ್ರಗಳನ್ನು ಮುಚ್ಚಿಬಿಡಬಹುದು. ತ್ವಚೆಯ ರಂಧ್ರಗಳು ಮುಚ್ಚಲ್ಪಟ್ಟರೆ ಅದರಿಂದ ಮೊಡವೆಗಳು ಬರುತ್ತದೆ. ನಿಮ್ಮ ತ್ವಚೆಯನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ತ್ವಚೆಯು ಎಣ್ಣೆಯಂಶವನ್ನು ಹೊಂದಿದ್ದರೆ ತೇವಾಂಶದೊಂದಿಗೆ ಧೂಳು ಮತ್ತು ಕಲ್ಮಶದೊಂದಿಗೆ ತ್ವಚೆಯಲ್ಲಿ ಮೊಡವೆಗಳು ಉಂಟಾಗಬಹುದು. ನಿಯಮಿತವಾಗಿ ತ್ವಚೆಯನ್ನು ತೊಳೆಯುವುದರಿಂದ ಕಲ್ಮಶ ದೂರವಾಗಿ ಆರೋಗ್ಯಕರ ತ್ವಚೆಯನ್ನು ಪಡೆಯಬಹುದಾಗಿದೆ.
ಗಾಳಿಯಲ್ಲಿ ತೇವಾಂಶವಿದ್ದರೂ ಒಣ ತ್ವಚೆಯವರಿಗೆ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಹೌದು ಮಳೆಗಾಲದಲ್ಲಿ ಇಂತಹ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಒಣ ತ್ವಚೆ ಹೊಂದಿರುವವರು ಪ್ರತೀ ರಾತ್ರಿ ಜೇನು ಮತ್ತು ಹಾಲಿನ ಮಿಶ್ರಣವನ್ನು ಹಚ್ಚಿಕೊಂಡರೆ ತ್ವಚೆಯಲ್ಲಿ ತೇವಾಂಶವು ನಿಯಂತ್ರಣದಲ್ಲಿರುತ್ತದೆ. ಆದರೆ ಒಂದು ಮಾತು ನೆನಪಿಡಿ ಸೋಪ್ ಅಥವಾ ಸೋಪ್‌ನಿಂದ ಮಾಡಲ್ಪಟ್ಟಿರುವಂತಹ ಫೇಸ್ ವಾಶ್ ಗಳನ್ನು ಯಾವತ್ತೂ ಬಳಸಬಾರದು. ಇದು ಒಣ ತ್ವಚೆಯ ತುರಿಕೆ ಮತ್ತು ಒಣಗುವಿಕೆ ಹೆಚ್ಚಿಸುತ್ತದೆ
ಮಳೆಗಾಲದಲ್ಲಿ ಪುದೀನ ಅಥವಾ ಪಪ್ಪಾಯ ಫೇಶಿಯಲ್ ಮಾಡಿಸಿಕೊಂಡರೆ ಒಳ್ಳೆಯ ಪರಿಣಾಮವಿರುತ್ತದೆ. ಪುದೀನ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ಚರ್ಮವನ್ನು ಮೃದುಗೊಳಿಸಿ ಮುಚ್ಚಿಹೋಗಿರುವ ರಂಧ್ರಗಳನ್ನೂ ಸಹ ಶುದ್ಧಿ ಮಾಡಿ ಆ ರಂಧ್ರಗಳ ಗಾತ್ರವನ್ನು ಕಡಿಮೆಮಾಡುತ್ತದೆ. ಅಲ್ಲದೆ ಪಪ್ಪಾಯಿ ಹಣ್ಣಿನಿಂದ ಪೋಷಣೆ ಮಾಡಿದರೆ ಮುಖವು ತೇವಾಂಶದಿಂದ ಕಾಂತಿಯುತವಾಗಿ ಕಾಣುತ್ತದೆ.
ಎಣ್ಣೆ ತ್ವಚೆಯವರು ಮೊಡವೆ ಸಮಸ್ಯೆ ಹೆಚ್ಚಾಗಬಹುದು. ಆಯಿಲ್ ಬೇಸ್ಡ್ ಬ್ಯೂಟಿ ಪ್ರಾಡೆಕ್ಟ್ ಬಳಸಬೇಡಿ.
ಮಳೆಗಾಲವಾದರೂ ನೀರು ಕುಡಿಯುವುದು ಕಡಿಮೆ ಮಾಡಬಾರದು