
ಕಲಬುರಗಿ,ಜು.20: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯಲಾರಂಭಿಸಿದ್ದು, ಸಾಕಷ್ಟು ತಂಪಾದ ವಾತಾವರಣ ನಿರ್ಮಾಣವಾಗಿದೆ. ಡೆಂಗ್ಯೂ, ಮಲೇರಿಯಾ, ಶೀತ, ನೆಗಡಿ, ಜ್ವರ, ಅಜೀರ್ಣ ಸಮಸ್ಯೆ, ಕಾಲರಾ, ಕಲುಷಿತ ನೀರಿನ ಸೇವನೆಯಿಂದ ಇನ್‍ಫೆಕ್ಷನ್, ಲೆಪ್ಟೋಸ್ಪೈರೋಸಿಸ್‍ದಂತಹ ಮುಂತಾದ ಸಾಮಾನ್ಯವಾದ ಕಾಯಿಲೆಗಳು ಕಂಡುಬರುತ್ತವೆ. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾದದ್ದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಗುರುವಾರ ಜರುಗಿದ ‘ಮಳೆಗಾಲದ ಮುಂಜಾಗ್ರತೆ ಕ್ರಮಗಳು ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು.
ಮಳೆಗಾಲದಲ್ಲಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಕಲುಷಿತವಾದ ನೀರನ್ನು ಸೇವಿಸುವದರಿಂದ ಕಾಲರಾ ಉಂಟಾಗುತ್ತದೆ. ಉಷ್ಣಾಂಶದ ಪ್ರಮಾಣ ಕಡಿಮೆಯಾಗಿರುವದರಿಂದ ಜೀರ್ಣಕ್ರಿಯೆ ಶಕ್ತಿ ಕಡಿಮೆಯಾಗಿ ಅಜೀರ್ಣ, ಗ್ಯಾಸಟ್ರಬಲ್‍ದಂತಹ ಸಮಸ್ಯೆಗಳು ಉಂಟಾಗುತ್ತವೆ. ನೀರಿನಲ್ಲಿ ನೆನೆಯುವದರಿಂದ ಶೀತ, ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗಳು ಉಂಟಾಗುತ್ತವೆ. ಕೆಸರಲ್ಲಿ ಹೆಚ್ಚಾಗಿ ತಿರುಗಾಡುವದರಿಂದ ಬೆರಳುಗಳ ನಡುವೆ ಹುಣ್ಣಾಗುತ್ತವೆ ಎಂದರು.
ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡುವುದು, ಕಾಯಿಸಿ, ಆರಿಸಿದ ನೀರನ್ನು ಸೇವಿಸಬೇಕು. ಬಿಸಿ ಮತ್ತು ಶುಚಿಯಾದ ಆಹಾರವನ್ನು ಸೇವಿಸಬೇಕು. ಮಳೆಯಲ್ಲಿ ನೆನೆಯದಂತೆ ಲಕ್ಷ್ಯವಹಿಸುವುದು. ಆಗಾಗ್ಗೆ ಕೈ-ಕಾಲು ಚೆನ್ನಾಗಿ ಕೈತೊಳೆದುಕೊಳ್ಳುವುದು, ವಾಸಸ್ಥಳದ ಸಮೀಪ ನೀರು ನಿಲ್ಲದಂತೆ ನೋಡಿಕೊಂಡು, ಪರಿಸರ ಸ್ವಚ್ಛವಾಗಿರುವಂತೆ ಕಾಪಾಡುವುದು, ಬೀದಿ ಬದಿಯ ತೆರೆದಿಟ್ಟ ಆಹಾರ ಪದಾರ್ಥಗಳು ಸೇವಿಸದಿರುವುದು, ಸೊಳ್ಳೆಗಳ ಪರದೆಯನ್ನು ಬಳಸುವುದು, ಡಸ್ಟ್ ಬಿನ್‍ನ್ನು ಬಳಕೆ ಮಾಡದಿದ್ದಾಗ ಸರಿಯಾಗಿ ಮುಚ್ಚಿಡುವುದು, ದೇಹದ ಮೇಲೆ ಯಾವುದೇ ಗಾಯಗಳಾಗದಂತೆ ನೋಡಿಕೊಳ್ಳುವುದು, ವಿದ್ಯುತ್ ವೈಯರ್‍ಗಳ ಸಮೀಪ ಚಲಿಸಬಾರದು. ಜೀವಸತ್ವ ‘ಸಿ’ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವದು, ಬಿಸಿಪಾನೀಯಗಳನ್ನು ಸೇವಿಸಬೇಕೆಂದು ಅನೇಕ ಸಲಹೆಗಳು ಮತ್ತು ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಸಿವಯೋಗಪ್ಪ ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಮಂಗಳಾ, ಚಂದಮ್ಮಾ, ಲಕ್ಷ್ಮೀ, ನಾಗಮ್ಮ, ಜಗನಾಥ ಗುತ್ತೇದಾರ, ರೇಷ್ಮಾ ಸೇರಿದಂತೆ ಮತ್ತಿತರರು ಇದ್ದರು.