ಮಳೆಗಾಗಿ ಪ್ರಾರ್ಥಿಸಿ ಗ್ರಾಮ ದೇವತೆಗೆ ಎಡೆ ಅರ್ಪಿಸಿದ ಗ್ರಾಮಸ್ಥರು.


ಸಂಜೆವಾಣಿ ವಾರ್ತೆ
ಸಿರಿಗೇರಿ ಜು.18. ಮಳೆಗಾಗಿ ಪ್ರಾರ್ಥಿಸಿ ಸ್ಥಳೀಯ ಗ್ರಾಮ ದೇವತೆ ಮಾರೆಮ್ಮ ದೇವಿಗೆ ಗ್ರಾಮಸ್ಥರು ಎಡೆಕೊಡುವ ಪ್ರತಿತಿಯನ್ನು ಆಚರಿಸಿದರು. ಮುಂಗಾರು ಮಳೆ ಕ್ಷೀಣಿಸಿದಾಗ ವಾಡಿಕೆಯಂತೆ ಗ್ರಾಮಸ್ಥರು ಗ್ರಾಮ ದೇವತೆಗೆ ಎಡೆ ಅರ್ಪಿಸುವ ಕಾರ್ಯ ಮೊದಲಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಮುಂಗಾರು ಮಳೆಯು ಅತಿ ಕ್ಷೀಣಗೊಂಡು ಇಲ್ಲಿಯವರೆಗೂ ಬಿತ್ತನೆ ಮಾಡುವ ಮಟ್ಟಿಗೆ ಮಳೆ ಆಗಿಲ್ಲ. ಕಳೆದ ತಿಂಗಳು ಮತ್ತು ಈ ತಿಂಗಳಿನ ಪ್ರಾರಂಭದಲ್ಲಿ ಸಾಧಾರಣ ಮಳೆಯಾಗಿದ್ದು ಬಿಟ್ಟರೆ ರೈತರಿಗೆ ಅನುಕೂಲಕರ ಮಳೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪುಷ್ಯ ಮಾಸದ ಮಳೆ ಉತ್ತಮವಾಗಿ ಪ್ರಾರಂಭವಾಗಲಿ ಎಂದು ಬೇಡಿಕೆ ಇಟ್ಟು ಇಂದು ಗ್ರಾಮ ದೇವತೆಗೆ ಎಡೆ ಅರ್ಪಿಸುವ ಕಾರ್ಯ ಮಾಡಿದರು. ಗ್ರಾಮ ದೇವತೆ ಮಾರಮ್ಮ ದೇವಿ ಮತ್ತು ಗ್ರಾಮದಲ್ಲಿನ ಎಲ್ಲಾ ಹೆಣ್ಣು ದೇವತೆ ಗುಡಿಗಳಿಗೆ ಹೋಗಿ ಎಡೆ ಅರ್ಪಿಸುವಂತೆ ಗ್ರಾಮದ ಮುಖಂಡರ ನಿರ್ದೇಶನದಂತೆ ಮೈಕ್ ಮೂಲಕ ಪ್ರಚಾರ ಮಾಡಲಾಗಿತ್ತು. ಇಂದು ಗ್ರಾಮಸ್ಥರು ಬೆಳಗ್ಗೆಯಿಂದಲೇ ಎಲ್ಲಾ ದೇವತೆಗಳ ದೇವಸ್ಥಾನಗಳಿಗೆ ತೆರಳಿ ಎಡೆ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಫೋಟೋ. ಸಿರಿಗೇರಿಯ ಮಾರಮ್ಮ ದೇವಿ ದೇವಸ್ಥಾನದಲ್ಲಿ ಗ್ರಾಮಸ್ಥರು ಎಡೆ ಅರ್ಪಿಸಿದರು.