ಮಳೆಗಾಗಿ ಗ್ರಾಮಸ್ಥರಿಂದ ಕತ್ತೆಗಳಿಗೆ ಮದುವೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.30: ಜೂನ್ ತಿಂಗಳು ಕಳೆಯುತ್ತಾ ಬಂದರು ಸಮರ್ಪಕವಾಗಿ ಮಳೆ ಬಾರದ ಕಾರಣ ತಾಲೂಕಿನ ಹುಣಿಸಿಕಟ್ಟಿ ಗ್ರಾಮಸ್ಥರು ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿ ವರುಣದೇವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರೋಹಿಣಿ, ಭರಣಿ, ಕೃತಿಕಾ, ಇನ್ನು ಮುಂತಾದ ಮಳೆ ಕೈಕೊಟ್ಟ ಕಾರಣ ಉಳಿದ ಮಳೆಗಳು ಸಮೃದ್ಧವಾಗಿ ಬರಲಿ ಜನ, ಜಾನುವಾರುಗಳಿಗೆ ಹಾಗೂ ಪಕ್ಷಿಗಳಿಗೆ ಕುಡಿಯಲು ನೀರೊದಗಲಿ ಎಂದು ಮಳೆದೇವನನ್ನು ಪ್ರಾರ್ಥಿಸಿ ಗುರುವಾರ ಕತ್ತೆಗಳಿಗೆ ಮದುವೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು.
ಮಳೆ ಬಾರದೆ ಬರಗಾಲ ಎದುರಾದಾಗ ಕತ್ತೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಹಾಗೆ ನಮ್ಮ ತಿಳುವಳಿಕೆಯಲ್ಲಿ ಹಿಂದೆ ಊರಿನ ಹಿರಿಯರು ಕತ್ತೆಗಳಿಗೆ ಮದುವೆ ಮಾಡಿದಾಗ ಮಳೆ ಬಂದ ಉದಾಹರಣೆಗಳಿವೆ. ಆ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷದ ಐದು ಮಳೆಗಳು ಕೈಕೊಟ್ಟ ಕಾರಣ ರೈತರಿಗೆ ಬರದ ಭಯ ಎದುರಾಗಿದೆ ಹಾಗಾಗಿ ಉಳಿದ ಮಳೆಗಳಾಗಲಿ ಸಮೃದ್ಧವಾಗಿ ಬರಲಿ ಜನ,ಜಾನುವಾರುಗಳು ಹಾಗೂ ಪಕ್ಷಿಗಳಿಗೆ ಕುಡಿಯಲು ನೀರು ದೊರೆಯಲೆಂದು ವರುಣದೇವನನ್ನು ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿ ಮೆರವಣಿಗೆ ಕೈಗೊಂಡಿದ್ದೇವೆ, ಇದರಿಂದ ಇಂದು ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಕಾಣುತ್ತಿದೆ, ಈ ಬದಲಾವಣೆ ನಮ್ಮ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹುಣಿಸಿಕಟ್ಟಿ ಗ್ರಾಮದ ಎನ್.ಎಂ ವೀರಯ್ಯ ಹಾಗೂ ಕೂಡ್ಲಿಗಿ ಕೊಟ್ರೇಶ್     ತಿಳಿಸಿದರು.
ಕತ್ತೆಗಳಿಗೆ ಮದುವೆ ಮಾಡಿ ಗ್ರಾಮದ ದೇವರುಗಳ ದರ್ಶನ ಮಾಡಲಾಯಿತು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಮಕ್ಕಳು ಹಾಗೂ ಯುವಕರು ಪಾಲ್ಗೊಂಡಿದ್ದರು .