
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಅ.23: ಅನೇಕ ದಿನಗಳಿಂದ ಮಳೆಯು ಭೂಮಿಗೆ ಧರೆಗಿಳಿಯದೇ ರೈತರು ಬಿತ್ತನೆ ಮಾಡಿದ ಬೆಳೆಗಳು ತೇವಾಂಶವಿಲ್ಲದೇ ಒಣಗುತ್ತಿದ್ದರಿಂದ ತಾಲೂಕಿನ ಹ್ಯಾಳ್ಯಾ ಗ್ರಾಮದ ಜನತೆ ಮತ್ತು ಮಕ್ಕಳು ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಗುರ್ಜಿಯ ಮೊರೆ ಹೋಗಿ ಪೂಜೆ ಮಾಡಿದರು.
ನಿತೀಶ್ ಕುಮಾರ್ ಎಂಬ ಬಾಲಕನ ತಲೆಯ ಮೇಲೆ ಮಣೆಯನ್ನಿಟ್ಟು, ಅದರ ಮೇಲೆ ಆಕಳ ಸೆಗಣೆಯಿಂದ ತಯಾರಿಸಿದ ಗುರ್ಜಿ ಹೊರಿಸಲಾಯಿತು. ಗುರ್ಜಿ ಹೊತ್ತು ಮನೆ ಮನೆಗೆ ತೆರಳಿ, ಗುರ್ಜಿ ಹೊತ್ತವನ ಹಿಂದೆ ಬಾಲಕರು ಮತ್ತು ಬಾಲಕಿಯರು ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ ಕೊಳ್ಳ ಸುತ್ತಾಡಿ ಬಂದೆ, ಕಾರ ಮಳೆಯೆ, ಕಪ್ಪತ ಮಳೆಯೆ, ಸುರಿ ಸುರಿಯೇ ಮಳೆರಾಯ, ಬಣ್ಣ ಕೊಡತಿನಿ ಬಾ ಮಳೆಯೆ, ಸುಣ್ಣ ಕೊಡತಿನಿ ಸುರಿ ಮಳೆಯೇ ಎಂದು ಹಾಡುತ್ತಾ ಮೈಮೇಲೆ ನೀರು ಹಾಕಿಸಲಾಯಿತು. ಪ್ರತಿ ಮನೆಯಲ್ಲೂ ದವಸ ಧಾನ್ಯ ಪಡೆದು ಇದರಿಂದ ಕಡಬು ಮಾಡಿ ಗುರ್ಜಿಯಮ್ಮನಿಗೆ ಎಡೆ ನೀಡಿ ಗ್ರಾಮದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಸಾರ್ವಜನಿಕರಲ್ಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಶತಮಾನಗಳಿಂದಲೂ ಆಚರಣೆಯಲ್ಲಿರುವ ಗುರ್ಜಿಪೂಜೆ ವಿಶಿಷ್ಟವಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಕೊಟ್ರಮ್ಮ, ಗಂಗಮ್ಮ, ಪಾರ್ವತಿ, ರೂಪ ಇತರರು ಉಪಸ್ಥಿತರಿದ್ದರು.