ಮಳೆ:ಕುಸಿದ ಪತ್ರಕರ್ತ ದೀಕ್ಷಿತ್ ಮನೆ ಗೋಡೆ

ಗುಬ್ಬಿ, ಆ. ೧- ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪತ್ರಕರ್ತ ಆನಂದ್ ದೀಕ್ಷಿತ್ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.
ಪಟ್ಟಣದ ಬೆಲ್ಲದಪೇಟೆಯಲ್ಲಿನ ಶ್ರೀ ರಾಮಲಿಂಗೇಶ್ವರ ದೇವಾಲಯದ ಅರ್ಚಕರಾದ ಆನಂದ್ ದೀಕ್ಷಿತ್ ಅವರ ಹಳೆ ಮನೆಯ ಒಂದು ಭಾಗದ ಗೋಡೆ ಕಸಿದು ಬಿದ್ದಿದ್ದು, ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಮನೆಯಲ್ಲಿ ಹಲವಾರು ವರ್ಷದಿಂದ ವಾಸವಿದ್ದ ದೀಕ್ಷಿತ್ ಅವರ ಕುಟುಂಬಕ್ಕೆ ಆಧಾರವಾಗಿದ್ದ ಈ ಮನೆ ಮಳೆಗೆ ಸಿಲುಕಿ ಧರೆಗುರುಳಿರುವುದರಿಂದ ಈ ಕುಟುಂಬ ಸೂರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ರಾಮ ಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಆನಂದ್ ದೀಕ್ಷಿತ್ ಅವರ ಹಿರಿಯರು ಬಾಳಿ ಬದುಕಿದ ಮನೆ ಉಳಿಸಿಕೊಳ್ಳಲು ಹರಸಾಹಸ ನಡೆಸಿ ಈ ಹಿಂದೆ ಮನೆಯ ದುರಸ್ಥಿ ಮಾಡಿಕೊಂಡಿದ್ದರು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ರಾತ್ರಿ ಮನೆಯ ಗೋಡೆ ಧರೆಗುರುಳಿದ್ದು, ಇದರಿಂದ ದೀಕ್ಷಿತ್ ಕುಟುಂಬ ಕಂಗಾಲಾಗಿದೆ.
ತಾಲ್ಲೂಕು ಆಡಳಿತ ಮಳೆಯಿಂದಾಗಿ ಮನೆ ಕಳೆದುಕೊಂಡಿರುವ ಪತ್ರಕರ್ತ ಆನಂದ್ ದೀಕ್ಷಿತ್ ಅವರ ನೆರವಿಗೆ ಧಾವಿಸಿ ಸೂರು ಕಲ್ಪಿಸಿಕೊಡಬೇಕು ಎಂದು ಪತ್ರಕರ್ತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.