ಮಳಖೇಡದ ಬೃಂದಾವನದ ಕುರಿತು ಅಪಪ್ರಚಾರ ವಿರೋಧಿಸಿ ಮೌನ ಪ್ರತಿಭಟನೆ

ಕಲಬುರಗಿ.ಜೂ.23:ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡದಲ್ಲಿರುವ ಜಯತೀರ್ಥಯತಿಗಳ ಮೂಲ ಬೃಂದಾವನ ಸುಳ್ಳು ಎಂದು ಇತಿಹಾಸ ತಿರುಚಿ ಅಪಪ್ರಚಾರ ಮಾಡುತ್ತಿರುವ ಕೆಲವು ವಿದ್ವಾಂಸರ ನಡೆಯನ್ನು ಖಂಡಿಸಿ ನಗರದ ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಗುರುವಾರ ಆಸ್ತಿಕ, ವೈಚಾರಿಕ ಸಾಂಸ್ಕøತಿಕ ಕ್ಷೇತ್ರದ ಗಣ್ಯರು ಮತ್ತು ಭಕ್ತವೃಂದದವರು ಮೌನ ಪ್ರತಿಭಟನೆ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕಲ್ಯಾಣ ಕರ್ನಾಟಕದ ಮಹತ್ವದ ಐತಿಹಾಸಿಕ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಳಖೇಡದ ಜಯತೀರ್ಥರ ಮೂಲ ವೃಂದಾವನ ಪ್ರಸಿದ್ಧಿ ಪಡೆದಿದೆ. ರಾಷ್ಟ್ರಕೂಟರ ರಾಜಧಾನಿಯಾಗಿ ಜೈನ್, ವೈಷ್ಣವ, ಶಾಕ್ತರ ಕ್ಷೇತ್ರವಾದ ಮಳಖೇಡವು ದ್ವೈತ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ ಮಧ್ವಾಚಾರ್ಯರ ಗ್ರಂಥಗಳಿಗೆ ಕಲಬುರ್ಗಿ ಸಮೀಪದ ಯರಗೋಳದಲ್ಲಿ ಟೀಕಾ ಗ್ರಂಥಗಳನ್ನು ರಚಿಸಿದ ಜಯತೀರ್ಥರು ತಮ್ಮ ಗುರುಗಳ ಸಮಾಧಿಯ ಸಮೀಪವೇ ಕಾಗಿಣಾ ನದಿಯ ದಡದಲ್ಲಿನ ಗುಹೆಯಲ್ಲಿ ಜೀವಂತ ಸಮಾಧಿಯಾದರು. ಕಾರಣ 600 ವರ್ಷಗಳಿಂದ ಹೆಚ್ಚಿನ ಭಕ್ತರನ್ನು ಆಕರ್ಷಿಸುತ್ತಿದೆ. ಇಂತಹ ಕ್ಷೇತ್ರದ ಕುರಿತು ಅಪಪ್ರಚಾರ ಮಾಡುತ್ತಿರುವುದು ಕೇವಲ ಮಾಧ್ವ ವರ್ಗಕ್ಕೆ ಮಾತ್ರವಲ್ಲ, ಕಲ್ಯಾಣ ಕರ್ನಾಟಕ ಐತಿಹಾಸಿಕ ಧಾರ್ಮಿಕ ಕೇಂದ್ರಗಳ ಭಕ್ತರನ್ನು ಘಾಸಿಗೊಳಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಅಕ್ಷೋಬ ತೀರ್ಥರ ಸಮಾಧಿಯು ಮಳಖೇಡದಲ್ಲಿದ್ದು, ಅದಕ್ಕಾಗಿಯೇ ಅವರ ಶಿಷ್ಯರಾದ ಜಯತೀರ್ಥರು ಗುರುಗಳ ಸಮಾಧಿಯ ಪಕ್ಕದಲ್ಲಿಯೇ ಆಷಾಢ ಕೃಷ್ಣ ಪಂಚಮಿಯಂದು ಸಜೀವ ಸಮಾಧಿಸ್ಥರಾಗಿ ಇಂದಿಗೂ ಭಕ್ತರನ್ನು ಉದ್ಧರಿಸುತ್ತಿದ್ದಾರೆ. ಅವರ ಆರಾಧನೆ ಪ್ರತಿ ವರ್ಷ ಆಷಾಢ ಕೃಷ್ಣ ಪಂಚಮಿಯಂದು ವೈಭವದಿಂದ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬರುತ್ತಿರುವುದು ನಿಜಾಮ್ ಕಾಲದ ಆಡಳಿತಕ್ಕೂ ಹಾಗೂ ಇಂದಿನ ಆಡಳಿತಕ್ಕೂ ವಿದಿತವೇ ಆಗಿದೆ ಎಂದು ಅವರು ಹೇಳಿದರು.
ಗಂಗಾವತಿಯ ಆನೇಗುಂದಿ ಸಮೀಪದ ನವ ವೃಂದಾವನ ಗಡ್ಡೆಯಲ್ಲಿನ ಶ್ರೀ ರಘುವರ್ಯ ತೀರ್ಥರ ಸಮಾಧಿಯನ್ನು ಜಯತೀರ್ಥರ ಸಮಾಧಿಯೆಂದು ಬಿಂಬಿಸಿ ಹೇಳಿಕೆ ನೀಡಿ ಜಯತೀರ್ಥರ ಆರಾಧನೆಯ ದಿನದಂದು ಜಯತೀರ್ಥರ ಆರಾಧನೆಯನ್ನು ನವ ವೃಂದಾವನ ಗಡ್ಡೆಯಲ್ಲಿಯೇ ಆಚರಿಸುವುದಾಗಿ ಘೋಷಿಸಿ ಆಮಂತ್ರಿಸಿರುವುದು ಭಾರತಾದ್ಯಂತ ಮಾಧ್ವ ವರ್ಗಕ್ಕೆ ಅದರಲ್ಲಿಯೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲ ವರ್ಗದವರಿಗೆ ಘಾಸಿಗೊಳಿಸಿದೆ. ಸಮಾಜದ ಸಾಮರಸ್ಯವನ್ನು ಹಾಳು ಮಾಡುವಂತಾಗಿದೆ. ಜನರ ಧಾರ್ಮಿಕ ನಂಬಿಕೆಗಳನ್ನು ಕೆರಳಿಸುವ ಕೆಲಸವಾಗಿದೆ ಎಂದು ಅವರು ಎಚ್ಚರಿಸಿದರು.
ಜುಲೈ 17,18 ಮತ್ತು 19ರಂದು ಜರುಗುವ ಜಯತೀರ್ಥರ ಆರಾಧನೆಗೆ ಮಳಖೇಡಕ್ಕೆ ಬರುವುದನ್ನು ತಡೆಯಲು ಇಂತಹ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಅವಕಾಶ ಮಾಡಿಕೊಡದೇ ಜಿಲ್ಲಾಡಳಿತವು ಪ್ರತಿ ವರ್ಷದಂತೆ ಮಳಖೇಡಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸಹಕಾರವನ್ನು ನೀಡಬೇಕು ಎಂದು ಅವರು ಕೋರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಎಂ.ಎಸ್. ಪಾಟೀಲ್ ನರಿಬೋಳ್, ಗುಂಡಾಚಾರ್ಯ ಜೋಶಿ ನರಿಬೋಳ್, ಮಾಲಾಶ್ರೀ ಕಣ್ಣಿ, ಮುಕುಂದ್ ದೇಶಪಾಂಡೆ, ಶಾಮಸುಂದರ್ ಕುಲಕರ್ಣಿ, ರವಿ ಲಾತೂರಕರ್, ಡಾ. ಮಲ್ಲಿನಾಥ್ ತಳವಾರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.