ಮಲ್ಲಿಕಾರ್ಜುನ ಸ್ವಾಮಿ ಶಿಖರಮಠಗೆ ಬೆಂಬಲ

ದೇವದುರ್ಗ.ಏ.೨೧-ಮುಂಬರುವ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಮೇ ೯ರಂದು ಮತದಾನ ನಡೆಯಲಿದ್ದು, ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠಗೆ ಬೆಂಬಲ ನೀಡಿ, ಅವರ ಪರ ಪ್ರಚಾರ ಮಾಡಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಮುಖಂಡ, ಕನ್ನಡಪರ ಹೋರಾಟಗಾರ ಜಿ.ಬಸವರಾಜ ನಾಯಕ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಯುವಕರಿಗೆ ಆದ್ಯತೆ ನೀಡುವ ದೃಷ್ಠಿಯಿಂದ ಸಾಹಿತಿ ದಿ.ಎಸ್.ಜಿ.ಸ್ವಾಮಿ ಅವರ ಮಗ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠಗೆ ಬೆಂಬಲ ನೀಡಲಾಗಿದೆ. ಕನ್ನಡ ಸಾಹಿತ್ಯ, ನೆಲ ಜಲ ರಕ್ಷಣೆ ಮಾಡುವ ವಿಶ್ವಾಸವಿದೆ.
ನಾನು ೨೫ ವರ್ಷಗಳಿಂದ ಕನ್ನಡ ಪರ ಹೋರಾಟ ಮಾಡಿದ್ದೇನೆ. ಹಿಂದಿನ ಕಸಾಪ ತಾಲೂಕು ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ನರಸಿಂಗರಾವ್ ಸರ್ಕಿಲ್, ಮೈನುದ್ದೀನ್ ಕಾಟಮಳ್ಳಿ ಅವರ ಅವಧಿಯಲ್ಲಿ ಕನ್ನಡ ನಾಡು ನುಡಿಗಾಗಿ ದುಡಿದಿದ್ದೇನೆ. ಅವರು ಮಾಡಿದ ಪ್ರತಿಯೊಂದು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದೇನೆ. ಆದರೆ, ರಂಗಣ್ಣ ಪಾಟೀಲ್ ಅಳ್ಳುಂಡಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.
ರಂಗಣ್ಣ ಪಾಟೀಲ್ ಅಳ್ಳುಂಡಿ ಆರು ವರ್ಷ ತಾಲೂಕು ಕಸಾಪ ಅಧ್ಯಕ್ಷರಾಗಿದ್ದರೂ ಸದಸ್ಯತ್ವ ಹೆಚ್ಚಿಸಿಲ್ಲ. ತನ್ನ ಸಂಬಂಧಿಕರು, ಬೆಂಬಲಿಗರಿಗೆ ಸದಸ್ಯತ್ವ ಕೊಡಿಸಿದ್ದಾರೆ ವಿನಹ, ಕನ್ನಡ ಅಭಿಮಾನಿಗಳನ್ನು ಗುರುತಿಸಿ, ಬೆಳೆಸಿಲ್ಲ. ನರಸಿಂಗರಾವ್ ಸರ್ಕಲ್ ಕೂಡ ಅಧ್ಯಕ್ಷರಾಗಿದ್ದರೂ ನಾಡು ನುಡಿಗಾಗಿ ದುಡಿದವರನ್ನು ಗುರುತಿಸಿಲ್ಲ. ಮೈನುದ್ದೀನ್ ಕಾಟಮಳ್ಳಿ ಅಧ್ಯಕ್ಷರಾಗಿದ್ದಾಗ ನಮಗೆ ಸದಸ್ಯತ್ವ ನೀಡಲಾಗಿದೆ.
ರಂಗಣ್ಣ ಪಾಟೀಲ್ ಅಳ್ಳುಂಡಿ ಅವರ ಕೊಡುಗೆ ನಾಡು, ನುಡಿಗೆ ಶೂನ್ಯ. ರಾಯಚೂರಿನಲ್ಲಿ ೧೪೬೧, ಸಿಂಧನೂರಿನಲ್ಲಿ ೧೦೧೭ ಸದಸ್ಯರಾಗಿದ್ದರೆ, ದೇವದುರ್ಗದಲ್ಲಿ ಕೇವಲ ೮೮೬ ಸದಸ್ಯರನ್ನು ಮಾಡಲಾಗಿದೆ. ಕನ್ನಡದ ಮನಸ್ಸುಗಳನ್ನು ಗೆಲ್ಲುವದಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನಾವು ಮಲ್ಲಿಕಾರ್ಜುನ ಶಿಬಿರಮಠಗೆ ಬೆಂಬಲ ನೀಡುತ್ತಿದ್ದೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಹೇಶ ಜೋಷಿಗೆ ಬೆಂಬಲ ನೀಡಿ, ಅವರ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಮಪ್ಪ ಗವಾಯಿ, ನಿವೃತ್ತ ಶಿಕ್ಷಕ ಮಾನಶಯ್ಯ, ಹನುಮಂತಪ್ಪ, ಚನ್ನಪ್ಪ ವಕೀಲ, ಅಮೀದ್ ಸೇರಿದಂತೆ ಇತರರಿದ್ದರು.