ಮಲ್ಲಿಕಾರ್ಜುನ್ ಶೆಟ್ಟಿ ದೃಶ್ಯ ಕಲಾ ಕ್ಷೇತ್ರ ಕಂಡ ಅಪರೂಪದ ಮಾಣಿಕ್ಯ: ಮಾಂತಟ್ಟಿ

ಕಲಬುರಗಿ:ಮೇ.21: ದಿ. ಮಲ್ಲಿಕಾರ್ಜುನ್ ಶೆಟ್ಟಿ ಅವರು ದೃಶ್ಯ ಕಲಾ ಕಲಾ ಕ್ಷೇತ್ರ ಕಂಡ ಅಪರೂಪದ ಮಾಣಿಕ್ಯ ಎಂದು ಚಿತ್ರಕಲಾವಿದ ಎಚ್.ವಿ. ಮಾಂತಟ್ಟಿ ಅವರು ಹೇಳಿದರು.
ದೃಶ್ಯಕಲಾ ಕ್ಷೇತ್ರದ ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿದ ಕಲಾವಿದ ದಿ. ಮಲ್ಲಿಕಾರ್ಜುನ್ ಶೆಟ್ಟಿ ಅವರಿಗೆ ನಗರದ ಎಂಎಂಕೆ ಕಾಲೇಜು ಆಫ್ ವಿಜ್ವಲ್ ಆರ್ಟ್‍ನಲ್ಲಿ ಮಂಗಳವಾರ ಹಮ್ಮಿಕೊಂಡ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿ. ಮಲ್ಲಿಕಾರ್ಜುನ್ ಶೆಟ್ಟಿ ಅವರು ಅವರು ಕಲಾ ಶಿಕ್ಷಕರಾಗಿ, ಕಲಾವಿದರಾಗಿ, ಕಲಾ ಬರಹಗಾರರಾಗಿ, ಕಲಾ ವಿಮರ್ಶಕರಾಗಿ ಗಮನವನ್ನು ಸೆಳೆದಿದ್ದರು. ಕನ್ನಡ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ತುಂಬಾ ಪಾಂಡಿತ್ಯವನ್ನು ಹೊಂದಿದ್ದರು. ಮಿತ ಭಾಷೆಯಾಗಿದ್ದರೂ ಕೂಡ ಕಲಾ ಕ್ಷೇತ್ರದ ಕುರಿತು ಅಪಾರ ಚಿಂತನೆಯನ್ನು ಹೊಂದಿ ಸುದೀರ್ಘವಾದ ವಿಚಾರವನ್ನು ಮಂಡಿಸುತ್ತಿದ್ದರು ಎಂದರು.
ಮಲ್ಲಿಕಾರ್ಜುನ್ ಶೆಟ್ಟಿ ಅವರು ಮೂಲತಳ ಬೀದರ್ ಜಿಲ್ಲೆಯ ಹುಮ್ನಾಬಾದಿನವರಾಗಿದ್ದರು. ಕಲಾ ಶಿಕ್ಷಣ ಅರಸುತ್ತಾ ಬಂದು ಅಂದಾನಿ ಅವರ ಶಿಷ್ಯತ್ವವನ್ನು ಪಡೆದು ಶ್ರದ್ಧೆಯಿಂದ ಶಿಸ್ತಿನಿಂದ ಕಲಾ ಶಿಕ್ಷಣದಲ್ಲಿ ಡಿಪೆÇ್ಲೀಮಾ ಪದವಿಯನ್ನು ಪೂರೈಸಿದರು. ಹಾಗೂ ಬಿಕಾಂ ಪದವಿ ಪಡೆದು ಸ್ನಾತಕೋತರ ಪದವಿಯನ್ನು ಭಾರತದ ಖ್ಯಾತ ಕಲಾ ಸಂಸ್ಥೆಯಾದ ಬರೋಡಾ ಸ್ಕೂಲ್ ಆಫ್ ಆರ್ಟ್‍ದಲ್ಲಿ ಗೋಲ್ಡ್ ಮೆಡಲ್ ಪಡೆಯುವುದರೊಂದಿಗೆ ಪೂರೈಸಿದರು. ನಂತರ ಕಲಾ ಶಿಕ್ಷಕರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕೇವಲ ಶಿಕ್ಷಕರಾಗಿ ಅಷ್ಟೇ ಸೀಮಿತವಾಗಿರದೆ ಸಮಕಾಲೀನ ದೃಶ್ಯ ಕಲೆ ವಿಮರ್ಶಾತ್ಮಕ ಪ್ರಜ್ಞೆಯೊಂದಿಗೆ ತಮ್ಮನ್ನು ಬೆಸೆದುಕೊಂಡಿದ್ದರು. ತುಂಬಾ ಗಂಭೀರವಾಗಿ ಕಲೆಯನ್ನು ಹಾಗೂ ಕಲಾ ಸಾಹಿತ್ಯವನ್ನು ಅವರು ತೆಗೆದುಕೊಂಡಿದ್ದರು. ಹೀಗಾಗಿ ಅನೇಕ ಕಲಾ ಬರಹಗಳಿಗೆ ಅವರು ಕಾರಣರಾಗಿದ್ದರು ಎಂದು ಅವರು ಹೇಳಿದರು.
ಕಲಾ ಪ್ರದರ್ಶನ ಕಲಾ ಸ್ಪರ್ಧೆಗಳಲ್ಲಿ ಅವರು ತಮ್ಮ ಅಭಿರುಚಿಯನ್ನು ತೋರಿಸುತ್ತಿರಲಿಲ್ಲ. ಅದಕ್ಕೆ ಅವರದೇ ಆದ ಕಾರಣಗಳು ಧೋರಣೆಗಳೇ ಕಾರಣ ಎನ್ನಬಹುದು. ಆದರೆ ಇತ್ತೀಚಿಗೆ ಕಲಾ ಸಂಘಟನೆ ಕಲಾ ಚಟುವಟಿಕೆಗಳಲ್ಲಿ ತುಂಬಾ ಗಂಭೀರವಾಗಿ ತೊಡಗಿಸಿಕೊಂಡು ತಮ್ಮದೇ ಶೋಗಳನ್ನು ಏರ್ಪಡಿಸಿ ಕಲಾ ಚಟುವಟಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕದ ತಲಾ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನು ಮೂಡಿಸುವಲ್ಲಿ ಇವರ ಪ್ರಯತ್ನ ಸಾಗಿತ್ತು. ತುಂಬಾ ಪ್ರಾಮಾಣಿಕರು ಶಾಂತ ಸ್ವಭಾವದವರು ಅಪಾರ ಅನುಭವ ಉಳ್ಳವರು ಚಿಂತನ ಶೀಲರು ಹಾಗೂ ಸ್ನೇಹಜೀವಿಗಳು ಆಗಿದ್ದ ಮಲ್ಲಿಕಾರ್ಜುನ್ ಶೆಟ್ಟಿ ಕಲಬುರ್ಗಿಯ ಭರವಸೆಯ ಕಲಾವಿದರಾಗಿ ರೂಪಗೊಂಡಿದ್ದರು. ಸ್ನೇಹಿತ ಮಲ್ಲಿಕಾರ್ಜುನ್ ಶೆಟ್ಟಿ ಅವರ ಅಗಲಿಕೆ ಕರ್ನಾಟಕ ದೃಶ್ಯ ಕಲಾಕ್ಷೇತ್ರಕ್ಕೆ ನಷ್ಟ ಎಂದೇ ಹೇಳಬಹುದು ಎಂದು ಅವರು ಸಂತಾಪ ವ್ಯಕ್ತಪಡಿಸಿದರು.
ಡಾ. ವಿ.ಜಿ. ಅಂದಾನಿ ಅವರು ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಶಶಿರಾವ್ ಬಿರಾದಾರ್, ಚಂದ್ರಹಾಸ್ ವಾಯ್ಸ್ ಜಾಲಿಹಾಳ್, ಗೌತಮ್ ವಿ ಅಂದಾನಿ, ರಾಜಕುಮಾರ್ ಅಂದಾನಿ, ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.