ಮಲ್ಲಾಬಾದ ಮೂಲಸೌಲಭ್ಯಕ್ಕೆ ಒತ್ತಾಯಿಸಿ ಮಹಿಳೆಯರ ಆಕ್ರೋಶ

ಅಫಜಲಪುರ:ಆ.1: ಮಲ್ಲಾಬಾದ ಗ್ರಾಮ ಗ್ರಾ.ಪಂ ಕೇಂದ್ರಸ್ಥಾನವಾಗಿದ್ದರೂ ಇಲ್ಲಿಯ ಗ್ರಾಮಸ್ಥರಿಗೆ ಮೂಲಸೌಲಭ್ಯಗಳಾದ ಕುಡಿಯುವ ನೀರು, ಸುಸಜ್ಜಿತ ಮಹಿಳಾ ಶೌಚಾಲಯ, ಉದ್ಯೋಗ ಖಾತ್ರಿ ಯೋಜನೆಯಡಿ ಬಡ, ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡದೆ, ಅನ್ಯಾಯ ಮಾಡಲಾಗುತ್ತಿದೆ ಎಂದು ಗ್ರಾ.ಪಂ ಸದಸ್ಯೆ ಭಾಗಮ್ಮ ಭೀಮಶ್ಯಾ ದೊಡ್ಡಮನಿ ಅವರು ತಮ್ಮ ಆಕ್ರೋಶ ಹೊರಹಾಕಿದರು.

ಗ್ರಾಮದ ಮಹಿಳೆಯರೊಂದಿಗೆ ತಾ.ಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಮಾತನಾಡಿದ ಅವರು, ಗ್ರಾ.ಪಂ ಅಧ್ಯಕ್ಷರು ಮಾರಿ ನೋಡಿ ಮಳಾ ಹಾಕುತ್ತಾರೆ. ನಿಜವಾದ ಬಡವರಿಗೆ ಮನೆ ಹಾಕುತ್ತಿಲ್ಲ ಎಂದು ಕಿಡಿ ಕಾರಿದರು. ಕಳೆದ ಹಲವಾರು ದಿನಗಳಿಂದ ಗ್ರಾಮದಲ್ಲಿರುವ ಕುಡಿಯುವ ನೀರಿನ ಪೈಪ್‍ಲೈನ್ ಮುರಿದು ಹೋಗಿದೆ. ನಲ್ಲಿಗಳಿಗೆ ನೀರು ಬರುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ, ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿ, ಹೊಸ ಪೈಪ್‍ಲೈನ್ ಅಳವಡಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ ಅವರು, ಗ್ರಾಮದಲ್ಲಿ ಮಹಿಳೆಯರಿಗೆ ಸುಸಜ್ಜಿತವಾದ ಮಹಿಳಾ ಶೌಚಾಲಯ ಇಲ್ಲದೆ ಇರುವುದರಿಂದ ಮಹಿಳೆಯರು ಪರಿತಪಿಸುತ್ತಿದ್ದಾರೆ. ಈ ಕೂಡಲೇ ಸುಸಜ್ಜಿತ ಶೌಚಾಲಯ ಕಾಮಗಾರಿ, ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ, ಕೃಷಿ ಬಡ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಿಸಿ, ಉದ್ಯೋಗ ನೀಡಬೇಕು ಎಂದು ಹೇಳಿದರು.

ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ಗ್ರಾ.ಪಂ ಆಡಳಿತದ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜು ಕಿಣಗಿ ಜೇವರ್ಗಿ ಮುಖಂಡರು, ಪ್ರಭಾಕರ ದೊಡ್ಡಮನಿ, ಭೀಮಶ್ಯಾ ದೊಡ್ಡಮನಿ, ಹಾಜಿಸಾಬ ದಫೇದಾರ, ಸಿದ್ದರಾಮ ಶಿಂಧೆ, ಖಾಜು ಪೂಜಾರಿ, ರಾಜು ಬೊಮ್ಮನಳ್ಳಿ, ಚಂದ್ರಕಲಾ ದೊಡ್ಡಮನಿ, ಕಾವೇರಿ ದೊಡ್ಡಮನಿ, ಜನ್ನಾಬಾಯಿ ಕ್ಷತ್ರಿ, ರಮಾಬಾಯಿ, ಚಂದ್ರಕಲಾ ಮಳಸಿದ್ದಪ್ಪ ಪೂಜಾರಿ, ಕಾಶೀಬಾಯಿ ಪೂಜಾರಿ, ಪರಮವ್ವ ಪೂಜಾರಿ, ಶಂಕರ ಗೊಂದಳಿ, ಪರಮವ್ವ ಪೂಜಾರಿ ಸೇರಿದಂತೆ ಹಲವಾರು ಜನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.