ಮಲ್ಲಾಪೂರಕ್ಕೆ ಬಸ್ ಸಂಚಾರ ಆರಂಭ, ಗ್ರಾಮಸ್ಥರಿಂದ ಹರ್ಷ

ಅರಕೇರಾ.ಆ.೦೪- ದೇವದುರ್ಗ ತಾಲ್ಲೂಕಿನ ಭುಮನಗುಂಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಮಲ್ಲಾಪೂರ ಗ್ರಾಮಕ್ಕೆ ದೇವದುರ್ಗ ಘಟಕದವತಿಯಿಂದ ಬಸ್ಸು ಸಂಚಾರ ಆರಂಭವಾಯಿತು.
ಬುಧವಾರ ಮುಂಜಾನೆ ಬಸ್ಸು ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಕೂಡಿಕೊಂಡು ತಳಿರು-ತೋರಣಗಳಿಂದ ಅಲಂಕಾರ ಮಾಡಿ ಗ್ರಾಮಸ್ಥರು ಬಸ್ಸಿಗೆ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಶಾಲಾ-ಕಾಲೇಜು, ಕಚೇರಿ ಕೆಲಸ ಕಾರ್ಯಗಳಿಗೆ ನಿತ್ಯ ನೂರಾರು ಜನಸಾಮಾನ್ಯರು ಅರಕೇರಾ, ದೇವದುರ್ಗ ಪಟ್ಟಣಗಳಿಗೆ ಪ್ರಯಾಣಿಸುವುದಕ್ಕೆ ಖಾಸಗಿ ವಾಹನಗಳ ಮೊರೆ ಹೋಗಿದ್ದರು.
ಬಸ್ ಸಂಚಾರ ಆರಂಭವಾಗಿರುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ಸಧ್ಯ ಬೆಳಗ್ಗೆ ಮತ್ತು ಸಂಜೆಗೆ ಒಂದು ಬಾರಿ ಮಾತ್ರ ಮಲ್ಲಾಪುರದಿಂದ ಅರಕೇರಾ ಮಾರ್ಗವಾಗಿ ದೇವದುರ್ಗಕ್ಕೆ ಹೊರಡಲಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಿದರು.
ತಳಿರು ತೋರಣಗಳಿಂದ ಶೃಂಗಾರಗೊಂಡು ಚಾಲನೆಗೆ ಸಿದ್ಧವಾದ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು, ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿದರು. ಗ್ರಾಮಸ್ಥರ ಮನವಿ ಮೇರೆಗೆ ಬಸ್ ಸೌಲಭ್ಯ ಕಲ್ಪಿಸಿಕೊಟ್ಟ ಶಾಸಕ ಕೆ.ಶಿವನಗೌಡ ನಾಯಕರ ಸೂಚನೆ ಮೇರೆಗೆ ನಮ್ಮ ಗ್ರಾಮಕ್ಕೆ ಬಸ್ಸು ಸಂಚಾರ ಇಂದಿನಿಂದ ಪ್ರಾರಂಭವಾಗಿದ್ದು ಕಛೇರಿ ಕಾರ್ಯಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಬಹಳಷ್ಷು ಅನುಕೂಲವಾಗುತ್ತಿದ್ದು ಇಂದು ಗ್ರಾಮದಲ್ಲಿ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿ ಶಾಸಕರಿಗೆ ಅಭಿನಂದಿಸಿದರು.
ಈ ವೇಳೆ ಬಸವರಾಜ ಪೂಜಾರಿ, ಶಿವಪ್ಪ ಪೂಜಾರಿ, ಕಿಷ್ಟಪ್ಪ ಪೋಲಿಸ್ ಪಾಟೀಲ್, ಪದ್ದಯ್ಯ ಮಾಲಿ ಪಾಟೀಲ್, ಜಗನ್ನಾತ ಆರ್ ನಾಯಕ, ಆಂಜನೇಯ ದಳವಾಯಿ, ವಿಠೋಬ ಗಾಲಿ, ಆಂಜನೇಯ ಸೆರಗಿನ, ಲಚಮಯ್ಯ, ಆಂಜನೇಯ ಪೂಜಾರಿ, ಚನ್ನಪ್ಪ ದೊಸಗಿನ ಸೇರಿ ವಿದ್ಯಾರ್ಥಿಗಳು ಇದ್ದರು.