ಮಲ್ಲಟ ಜಿ.ಪಂ ಕ್ಷೇತ್ರದಲ್ಲಿ ಬಿ.ವಿ.ನಾಯಕ ಪ್ರಚಾರ

ಸಿರವಾರ,ಏ.೨೬- ಮಾನವಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ವಿ.ನಾಯಕ ಅವರು ಇಂದು ತಾಲ್ಲೂಕಿನ ಮಲ್ಲಟ ಜಿ.ಪಂ ಕ್ಷೇತ್ರದ ಕುರುಕುಂದ, ಪಟಕನದೊಡ್ಡಿ, ವಡವಟ್ಟಿ ಗ್ರಾಮ, ವಡವಟ್ಟಿ ತಾಂಡ, ಮಲ್ಲಟ, ನುಗಡೋಣಿ ಮತ್ತು ಎನ್.ಹೊಸೂರು ಗ್ರಾಮಗಳಲ್ಲಿ ಭರ್ಜರಿಯಾಗಿ ಮತಯಾಚನೆ ಮಾಡಿದರು.
ಇದೇ ವೇಳೆ ಅಭ್ಯರ್ಥಿಯಾಗಿರುವ ಬಿ.ವಿ.ನಾಯಕ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಒಂದು ಬಾರಿ ಅವಕಾಶವನ್ನು ಮಾಡಿಕೊಡಿ. ಅಭಿವೃದ್ಧಿಯಲ್ಲಿ ಮಾನ್ವಿ ಕ್ಷೇತ್ರ ಹಿಂದುಳಿದಿದೆ. ಸರ್ವಾಂಗೀಣ ಅಭಿವೃದ್ಧಿಗಾಗಿ ನನಗೆ ಸಹಕಾರ ನೀಡುವಂತೆ ಮತದಾರರಲ್ಲಿ ಮನವಿ ಮಾಡಿ. ನಾನು ಜನರ ಸೇವೆಯನ್ನು ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯದಲ್ಲಿ ಜನರಿಗೆ ಮೋಸ ಮಾಡುವಂತಹ ವ್ಯಕ್ತಿ ನಾನಲ್ಲ. ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ನಮ್ಮ ಕುಟುಂಬ ಸಾಗುತ್ತಿದ್ದೇವೆ. ಜನರ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾನು ನಿರಂತರವಾಗಿ ನಿಮ್ಮ ಸೇವಕನಾಗಿ ದುಡಿಯುತ್ತೇನೆ. ನಿಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಪಕ್ಷ ಸೇರ್ಪಡೆ: ಇದೇ ವೇಳೆ ವಡವಟ್ಟಿ ಗ್ರಾಮದ ೫೦ಕ್ಕೂ ಹೆಚ್ಚು ಹಾಗೂ ಎನ್.ಹೊಸೂರು ಗ್ರಾಮದ ಜೆಡಿಎಸ್ ಮುಖಂಡರಾಗಿದ್ದ ಪ್ರಭುಗೌಡ ಸೇರಿದಂತೆ ಅವರ ೨೦ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಇಂದು ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ,ಅಮರೇಶಪ್ಪ ವೈ, ಜೆ.ಶರಣಪ್ಪಗೌಡ, ಜೆ.ದೇವರಾಜಗೌಡ ಶಿವಶರಣಗೌಡ ಲಕ್ಕಂದಿನ್ನಿ, ದೇವರಾಜ ನಾಯಕ, ಮೌಲಸಾಬ್ ಗಣದಿನ್ನಿ,ರಾಜಗೋಪಾಲ, ಜಯರಾಜ ಜಡಿಮಳೆ, ಅಜಿತ್ ಕುಮಾರ್ ಹೊನ್ನಟಗಿ, ವಿನಯಮಾರ್, ಮಾರೆಪ್ಪ, ಅನೇಕರು ಇದ್ದರು.