ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ

ಕೋಲಾರ,ನ.೧೬- ಮಕ್ಕಳಲ್ಲಿ ಮನೋವಿಕಾಸ, ಸಂಭ್ರಮ, ಸಂತೋಷ, ಮತ್ತು ಸ್ಪೂರ್ತಿ ತುಂಬುವ ಕಾರಣದಿಂದಲೂ ರೋಗಗಳನ್ನು ಗುಣಪಡಿಸಬಹುದು ಎನ್ನುವ ಸದಾಶಯದಿಂದ ನಗರದ ಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಜ್ವರ ಶೀತ ನೆಗಡಿ ಮುಂತಾದ ಕಾಯಿಲೆಗಳಿಗಾಗಿ ಹಾಗೂ ಶಸ್ತ್ರಚಿಕಿತ್ಸೆ ಪಡೆದಿರುವ ಮಕ್ಕಳು ತಮಗೆ ದೊರೆತ ಸಣ್ಣ ಅವಕಾಶದಲ್ಲಿ ಹಾಡು ಹೇಳುವ ಮೂಲಕ, ನೃತ್ಯ ಮಾಡುವ ಮೂಲಕ ಪ್ರತಿಭೆಯನ್ನು ಮೆರೆದರು.
ಎಲ್ಲ ಮಕ್ಕಳಿಗೆ ಸಿಹಿ ಹಂಚಲಾಯಿತು ಮತ್ತು ಆಟಿಕೆಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಖ್ಯಾತ ಮಕ್ಕಳ ತಜ್ಞ ಡಾ.ವೈ.ಸಿ.ಬಿರೇಗೌಡ ಮಾತನಾಡಿದ ಮಕ್ಕಳನ್ನು ಚಿಕಿತ್ಸೆ ಮಾಡುವುದು ಒಂದು ಪುಣ್ಯದ ಕೆಲಸ ನಾವು ಮಕ್ಕಳಲ್ಲಿ ಮಕ್ಕಳಾಗಿ ವರ್ತಿಸುತ್ತಾ, ಸಂವೇದಿಸುತ್ತಾ ಪ್ರೀತಿಪೂರ್ವಕವಾಗಿ ಚಿಕಿತ್ಸಾ ವಿಧಾನಗಳನ್ನು ಮಾಡುವುದರಿಂದ ಮಕ್ಕಳು ಶೀಘ್ರವಾಗಿ ಗುಣಮುಖರಾಗುತ್ತಾರೆ. ಇದು ನನ್ನ ಬಲವಾದ ನಂಬಿಕೆ. ಈ ಶ್ರೇಷ್ಠವಾದ ಕಾಯಕವನ್ನು ಮಾಡಲು ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ಅವರು ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ಮಕ್ಕಳ ಪೋಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು
ಕಾರ್ಯಕ್ರಮದಲ್ಲಿ ಖ್ಯಾತ ಕ್ಷ- ಕಿರಣ ತಜ್ಞ ಡಾ.ವೈ.ಸಿ ಮಂಜುನಾಥ್, ಖ್ಯಾತ ಪ್ರಸೂತಿ ತಜ್ಞ ವೈದ್ಯೆ ಡಾ.ಉಮಾದೇವಿ, ಸಾಹಿತಿಗಳಾದ ಡಾ.ಗುಣವಂತ ಮಂಜು ಮತ್ತು ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಶುಶ್ರೂಷ ಸೇವಕಿಯರು ಭಾಗಿಯಾಗಿದ್ದರು.