ಮಲ್ಕಾಪುರೆಗೆ ಮೇಲ್ಮನೆ ವಿಪಕ್ಷ ನಾಯಕ ಪಟ್ಟ

ನಾಳೆ ಅಧಿಕೃತ ಸೇರ್ಪಡೆ
-ಮಹಮ್ಮದ್

ಬೆಳಗಾವಿ, ಡಿ.೮-ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಸ್ಥಾನ ಮಾನ ನೀಡಬೇಕೆನ್ನುವ ಬೇಡಿಕೆಗೆ ಮಣಿದಿರುವ ಬಿಜೆಪಿ ವರಿಷ್ಠರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕ ಮೂಲದ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ನೇಮಕ ಮಾಡಲು ಮುಂದಾಗಿದ್ದು, ನಾಳೆ(ಶನಿವಾರ)ಅಧಿಕೃತವಾಗಿ ಆದೇಶ ಹೊರಬೀಳುವ ಸಾಧ್ಯತೆ ಇದೆ.ವಿಧಾನ ಪರಿತ್‌ನಲ್ಲೀಗ ೭೫ ಸ್ಥಾನಗಳಿದ್ದು, ಕಾಂಗ್ರೆಸ್ ೨೯ ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿಯು ೩೪ ಹಾಗೂ ಜೆಡಿಎಸ್ ೮ ಸ್ಥಾನಗಳನ್ನು ಹೊಂದಿದೆ. ಒಂದು ಪಕ್ಷೇತರ ಸ್ಥಾನವಿದೆ. ಹಲವು ದಿನಗಳಿಂದ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಬಿಜೆಪಿ ಮೇಲಿತ್ತು. ಇದೀಗ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಈ ಹಿಂದೆ ಹಂಗಾಮಿ ಸಭಾಪತಿ ಆಗಿ ಸೇವೆ ಸಲ್ಲಿಸಿದ್ದ ರಾಘನಾಥ್ ರಾವ್ ಮಲ್ಕಾಪುರೆ ಅವರನ್ನೇ ನೇಮಿಸಲು ಹಿರಿಯ ನಾಯಕರು ಅಂತಿಮ ತೀರ್ಮಾನ ಕೈಗೊಂಡಿದೆ.ಈಗಾಗಲೇ ವಿಧಾನಸಭೆಯ ವಿಪಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಆರ್.ಅಶೋಕ್, ಬಿಜೆಪಿ ರಾಜ್ಯ ಘಟಕ ಸ್ಥಾನಕ್ಕೆ ಲಿಂಗಾಯತ, ವೀರಶೈವ ಸಮುದಾಯದ ಬಿ.ವೈ.ವಿಜೇಯಂದ್ರ ಅವರಿಗೆ ಮಣೆ ಹಾಕಿರುವ ಹಿನ್ನೆಲೆ ವಿಧಾನ ಪರಿಷತ್ತಿನ ಸ್ಥಾನವನ್ನು ಹಿಂದುಳಿದ ಸಮುದಾಯದ ಅದರಲ್ಲೂ ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯ ರಾಘನಾಥ್ ರಾವ್ ಮಲ್ಕಾಪುರೆ ಅವರನ್ನು ನೇಮಿಸಲು ಬಿಜೆಪಿ ಮುಂದಾಗಿದೆ.ವಿಪಕ್ಷದ ನಾಯಕನ ಸ್ಥಾನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ, ತೇಜಸ್ವೀನಿಗೌಡ, ನಾರಾಯಣಸ್ವಾಮಿ ಸಹ ಅನೇಕರು ರೇಸ್‌ನಲ್ಲಿದ್ದರು. ಆದರೂ, ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಉತ್ತರ ಕರ್ನಾಟಕ ಭಾಗದ ರಾಘನಾಥ್ ರಾವ್ ಮಲ್ಕಾಪುರೆ ಅವರನ್ನೇ ಮಣೆ ಹಾಕಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.ಯಾರು ಮಲ್ಕಾಪುರೆ?: ಬೀದರ್ ಜಿಲ್ಲೆಯ ಮೂಲದ ರಾಘನಾಥ್ ರಾವ್ ಮಲ್ಕಾಪುರೆ ಅವರು ೧೯೯೦ನೇ ಸಾಲಿನಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ಅಲ್ಲಿಂದ ೧೯೯೩ನೇ ಸಾಲಿನಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯ ಕಾರಿಣಿ ಸಮಿತಿ ಸದ್ಯಸರಾಗಿ, ೨೦೦೦ನೇ ಸಾಲಿನಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಅಲ್ಲಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಹಾಪ್ರಧಾನ ಕಾರ್ಯದರ್ಶಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಂಗಾಮಿ ಸಭಾಪತಿ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯ ನಾಯಕರು ಮೂವರ ಹೆಸರುಗಳನ್ನು ದೆಹಲಿಗೆ ಕಳುಹಿಸಿದ್ದು, ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಕೋಟ ಶ್ರೀನಿವಾಸಪೂಜಾರಿ, ಶಶೀಲ್ ನಮೋಶಿ, ರಘುನಾಥರಾವ್ ಮಲ್ಕಾಪುರೆ ಹೆಸರುಗಳನ್ನು ಸೂಚಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಮುನಿಸಿಕೊಂಡಿದ್ದ ವರಿಷ್ಠರು ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ವಿಧಾನಸಭೆ ವಿರೋಧಪಕ್ಷದ ಸ್ಥಾನವನ್ನು ಆರು ತಿಂಗಳಾದರೂ ಆಯ್ಕೆ ಮಾಡಿರಲಿಲ್ಲ. ಇದು ಆಡಳಿತಾರೂಢ ಇದು ಪಕ್ಷದ ಟೀಕೆಗೂ ಗುರಿಯಾಗಿತ್ತು.ನವೆಂಬರ್‌ನಲ್ಲಿ ಅಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕರ ಆಯ್ಕೆ ನಡೆಯಿತು. ಇದರ ಬೆನ್ನಲ್ಲೇ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ, ಎರಡೂ ಸದನಗಳ ಉಪನಾಯಕ ಮತ್ತು ಸಚೇತಕರ ಸ್ಥಾನಕ್ಕೂ ಆಯ್ಕೆ ಆಗಬಹುದು ಎಂಬ ನಿರೀಕ್ಷೆ ಇತ್ತು.ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಆರ್. ಅಶೋಕ ಅವರನ್ನು ಆಯ್ಕೆ ಮಾಡಿದಾಗಲೇ, ಪರಿಷತ್ತಿಗೂ ಆಯ್ಕೆಯಾಗಲಿದೆ ಎಂದು ಹೇಳಲಾಗಿತ್ತು. ಬೆಳಗಾವಿ ಅಧಿವೇಶನದ ಎರಡನೇ ವಾರ ಪಕ್ಷದ ವರಿಷ್ಠರು ಹೆಸರು ಸೂಚಿಸಬಹುದು ಎನ್ನುವ ನಿರೀಕ್ಷೆ ಇದೆ.