ಮಲೇಶ್ಯಾ ಪ್ರವಾಸಿಗರು ಸುರಕ್ಷಿತ

ಮನಾಲಿ (ಹಿಮಾಚಲ ಪ್ರದೇಶ), ಜು.೧೩- ಅಬ್ಬರದ ಪ್ರವಾಹ ಪೀಡಿತ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಮಲೇಶ್ಯಾದ ೧೧ ಪ್ರವಾಸಿಗರು ಇದೀಗ ಸುರಕ್ಷಿತ ಪ್ರದೇಶದಲ್ಲಿ ಇದ್ದಾರೆ ಎಂದು ಅಧಿಕೃತಪಡಿಸಲಾಗಿದೆ. ಈ ಹಿಂದೆ ಪ್ರವಾಸಿಗರು ಕಣ್ಮರೆಯಾಗಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಹಿಮಾಚಲ ಪ್ರದೇಶದ ಮನಾಲಿ ಎಂಬ ಪಟ್ಟಣದಲ್ಲಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ನವದೆಹಲಿಯಲ್ಲಿರುವ ಮಲೇಷ್ಯಾ ಹೈಕಮಿಷನ್‌ಗೆ ತಿಳಿಸಲಾಗಿದೆ ಎಂದು ಮಲೇಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ. ನಾಪತ್ತೆಯಾಗಿರುವ ೧೩ ಪ್ರವಾಸಿಗರ ಪೈಕಿ ೧೦ ಮಂದಿ ಮಲೇಶ್ಯಾ, ಚೀನಾದ ಇಬ್ಬರು ಹಾಗೂ ಓರ್ವ ಬ್ರಿಟನ್ ಪ್ರಜೆಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಇನ್ನು ಸುರಕ್ಷಿತ ಪ್ರದೇಶದಲ್ಲಿರುವ ಪ್ರವಾಸಿಗರನ್ನು ಗುರುವಾರ ದೆಹಲಿಗೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ. ಒಂದು ವೇಳೆ ಸ್ಥಳಾಂತರ ಪ್ರಕ್ರಿಯೆ ಸರಿಯಾಗಿದ್ದರೆ ಅದೇ ದಿನ ಅವರು ಮಲೇಷ್ಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಎಲ್ಲಾ ಮಲೇಷಿಯನ್ನರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ಒದಗಿಸಿದ ಸಹಕಾರ ಮತ್ತು ತಕ್ಷಣದ ಸಹಾಯಕ್ಕಾಗಿ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ ಎಂದು ಸಚಿವಾಲಯ ತಿಳಿಸಿದೆ. ಉತ್ತರಾಖಂಡ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಈಗಾಗಲೇ ಜನಜೀವನ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.