
ಘಾನಾ, ಎ.೧೩- ಆವಿಷ್ಕರಿಸಿದ ವಿಜ್ಞಾನಿಗಳಿಂದಲೇ ಗೇಮ್ ಚೇಂಜರ್ ಎಂದು ಕರೆಸಿಕೊಂಡಿರುವ ಬಹುನಿರೀಕ್ಷಿತ ಮಲೇರಿಯಾ ಲಸಿಕೆ ಆರ್೨೧ ಘಾನಾ ಅನುಮೋದಿಸಿದೆ. ಈ ಮೂಲಕ ಮಲೇರಿಯಾ ಲಸಿಕೆಯನ್ನು ಅನುಮೋದಿಸಿದ ವಿಶ್ವದ ಮೊದಲ ದೇಶವಾಗಿ ಘಾನಾ ಹೊರಹೊಮ್ಮಿದೆ. ಆದರೆ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯ ದಾಖಲೆ ಇನ್ನೂ ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ. ಹೀಗಿದ್ದರೂ ಲಸಿಕೆಗೆ ಅನುಮೋದನೆ ನೀಡಲಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಆಫ್ರಿಕಾ ಖಂಡದಲ್ಲಿ ಮಲೇರಿಯಾ ಅತೀ ಹೆಚ್ಚಿನ ಹಾನಿ ಉಂಟು ಮಾಡುತ್ತಿದೆ. ಪ್ರತೀ ವರ್ಷ ವಿಶ್ವದಾದ್ಯಂತ ೬.೨೦ ಲಕ್ಷ ಜನರು ಮಲೇರಿಯಾ ಜ್ವರಕ್ಕೆ ಮೃತಪಡುತ್ತಿದ್ದು, ಇದರಲ್ಲಿ ಹೆಚ್ಚಿನ ಪಾಲು ಆಫ್ರಿಕಾ ಖಂಡ ಒಂದರಿಂದಲೇ ಇದೆ. ಸದ್ಯ ಆರ್೨೧ ಎಂಬ ಹೆಸರಿನಿಂದ ಕರೆಯಲ್ಪಡುವ ಮಲೇರಿಯಾ ಲಸಿಕೆಯು ಈ ಹಿಂದಿನ ಮಲೇರಿಯಾ ಲಸಿಕೆಗಿಂತ ಅತ್ಯಂತ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ಘಾನಾದ ಔಷಧ ನಿಯಂತ್ರಕರು ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವು ಆರ್೨೧ ಲಸಿಕೆಯ ಆರಂಭಿಕ ಪ್ರಾಯೋಗಿಕ ಪರೀಕ್ಷೆಯ ಡೇಟಾ (ದಾಖಲೆ) ಪಡೆದುಕೊಂಡಿದ್ದು, ಆದರೆ ಈತನಕ ಸಾರ್ವಜನಿಕ ಪಡಿಸಿಲ್ಲ. ಹಾಗಿದ್ದರೂ ಲಸಿಕೆ ಬಳಸಲು ನಿರ್ಧರಿಸಲಾಗಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಕೂಡ ಲಸಿಕೆಯನ್ನು ಅನುಮೋದಿಸಲು ಎಲ್ಲಾ ತಯಾರಿ ನಡೆಸಿದೆ ಎನ್ನಲಾಗಿದೆ. ಇನ್ನು ಮಲೇರಿಯಾ ಪರಾವಲಂಬಿಯಿಂದ ದೇಹವನ್ನು ರಕ್ಷಿಸುವ ಲಸಿಕೆಯನ್ನು ಅಭಿವೃದ್ಧಿಪಡಿಸಲು ಇದು ಬೃಹತ್, ಶತಮಾನದ ಸುದೀರ್ಘ, ವೈಜ್ಞಾನಿಕ ಕಾರ್ಯವೆಂದು ಪರಿಗಣಿತವಾಗಿದೆ. ಬುರ್ಕಿನಾ ಫಾಸೊದಲ್ಲಿನ ಪ್ರಾಥಮಿಕ ಅಧ್ಯಯನಗಳ ಪ್ರಾಯೋಗಿಕ ಮಾಹಿತಿಯ ಪ್ರಕಾರ ಆರ್೨೧ ಲಸಿಕೆಯನ್ನು ಮೂರು ಆರಂಭಿಕ ಡೋಸ್‌ಗಳಾಗಿ ನೀಡಿದಾಗ ಮತ್ತು ವರ್ಷದಲ್ಲಿ ಒಂದು ಬಾರಿ ಬೂಸ್ಟರ್ ಡೋಸ್ ನೀಡಿದಾಗ ೮೦% ವರೆಗೆ ಪರಿಣಾಮಕಾರಿಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಲಸಿಕೆಯ ವ್ಯಾಪಕ ಬಳಕೆಯು ಸುಮಾರು ೫,೦೦೦ ಮಕ್ಕಳನ್ನು ಒಳಗೊಂಡ ದೊಡ್ಡ ಪ್ರಯೋಗದ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ. ಅದರೆ ಇವುಗಳು ಕಳೆದ ವರ್ಷದ ಕೊನೆಯಲ್ಲಿ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತು, ಆದರೆ ಇನ್ನೂ ಔಪಚಾರಿಕವಾಗಿ ಪ್ರಕಟಿಸಲಾಗಿಲ್ಲ. ಆದಾಗ್ಯೂ, ಅವುಗಳನ್ನು ಆಫ್ರಿಕಾದ ಕೆಲವು ಸರ್ಕಾರಿ ಸಂಸ್ಥೆಗಳು ಮತ್ತು ವಿಜ್ಞಾನಿಗಳೊಂದಿಗೆ ಡೇಟಾವನ್ನು ಹಂಚಿಕೊಳ್ಳಲಾಗಿದೆ. ಆದರೆ ಘಾನಾದ ಆಹಾರ ಮತ್ತು ಔಷಧಗಳ ಪ್ರಾಧಿಕಾರವು ಡೇಟಾವನ್ನು ಪಡೆದುಕೊಂಡಿದ್ದು, ಹಾಗಾಗಿ ಲಸಿಕೆಗೆ ಅನುಮೋದನೆ ನೀಡಿದೆ ಎನ್ನಲಾಗಿದೆ. ಉಳಿದಂತೆ ಉಳಿದ ಆಫ್ರಿಕಾ ಖಂಡದ ರಾಷ್ಟ್ರಗಳು ಡೇಟಾದ ಬಗ್ಗೆ ಅಧ್ಯಯನ ನಡೆಸುತ್ತಿದೆ ಎನ್ನಲಾಗಿದೆ.