ಮಲೇರಿಯಾ ತಡೆಗೆ ಮುನ್ನಚ್ಚರಿಕೆ ಅಗತ್ಯ-ಡಾ.ಕಮಲ

ಕೋಲಾರ,ಮೇ.೧- ಮಲೇರಿಯಾ ಮುಕ್ತ ಭಾರತಕ್ಕೆ ಸಹಕರಿಸಿ ೨೦೨೫ರೊಳಗೆ ಈ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಚಿಸುವ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಕಮಲ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಲೇರಿಯಾ ಸೋಂಕು ಹರಡದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಸಂಬಂಧ ಜನತೆಯಲ್ಲಿ ಜಾಗೃತಿ ಮೂಡಿಸಲು ವಿಶ್ವ ಮಲೇರಿಯಾ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಯಾವೂದೇ ಜ್ವರ ಮಲೇರಿಯಾ ಇರಬಹುದು ಆದುದರಿಂದ ಜ್ವರ ಬಂದ ತಕ್ಷಣ ವ್ಯಕ್ತಿಗಳನ್ನು ಗುರುತಿಸಿ ರಕ್ತ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.
ರಕ್ತ ಸಂಗ್ರಹಿಸಿದ ೨೪ ಗಂಟೆಗಳ ಒಳಗೆ ಪರೀಕ್ಷಾ ಫಲಿತಾಂಶ ಆಯಾ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಖಚಿತಪಡಿಸಿಕೊಳ್ಳಬಹುದು.
ರಕ್ತ ಲೇಪನ ಪರೀಕ್ಷೆಯಿಂದ ಮಲೇರಿಯ ರೋಗವೆಂದು ದೃಢಪಟ್ಟಲ್ಲಿ ರೋಗಗಳಿಗೆ ತೀರ್ವ ಚಿಕಿತ್ಸೆಯನ್ನು ವಯಸ್ಸಿಗನುಗುಣವಾಗಿ ಕ್ಲೋರೋಕ್ವಿನ್ ಮತ್ತು ಪ್ರಿಮೋಕ್ವಿನ್ ಗುಳಿಗೆಗಳನ್ನು (ಮಾತ್ರೆ) ನೀಡುವುದರ ಮೂಲಕ ರೋಗವನ್ನು ಗುಣಪಡಿಸಬಹುದು, ಈ ಗುಳಿಗೆಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯಕತೆಯರಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
ರೋಗದ ಲಕ್ಷಣಗಳೆಂದರೆ ಚಳಿ ಹೆಚ್ಚು, ನಡುಕದ ಜೊತೆ ಜ್ವರ, ಚಳಿಯ ನಂತರದ ವಿಪರೀತ ಜ್ವರ, ವಾಂತಿ, ತಲೆನೋವು, ಜ್ವರ ಕಡಿಮೆ ಯಾಗುವ ಸಮಯದಲ್ಲಿ ಬೆವರುವುದು, ಜ್ವರ ಕಡಿಮೆಯಾದ ನಂತರ ಸುಸ್ತು ಮತ್ತು ನಿಶ್ಯಕ್ತಿಯಾಗುವುದು, ಮಲೇರಿಯಾ ಸೋಂಕಿನಿಂದ ಗರ್ಭಿಣಿ ತಾಯಂದಿರಲ್ಲಿ ಗರ್ಭಪಾತದ ಸಮಸ್ಯೆಯೂ ಕಾಡುತ್ತದೆ ಎಂದು ತಿಳಿಸಿದ್ದಾರೆ.
ಮಲೇರಿಯ ರೋಗಾಣುಗಳನ್ನು ಹೊಂದಿರುವ ವ್ಯಕ್ತಿಯನ್ನು ಕಚ್ಚಿದ ಹೆಣ್ಣು ಅನಾಪಿಲಿಸ್ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಮಲೇರಿಯಾ ರೋಗ ಹರಡುತ್ತದೆ. ಕಚ್ಚಿದ ೧೦ ರಿಂದ ೧೪ ದಿವಸದೊಳಗಾಗಿ ರೋಗವು ಮನುಷ್ಯನಲ್ಲಿ ಮಲೇರಿಯಾ ರೋಗದ ಲಕ್ಷಣಗಳು ಕಾಣಿಸಲು ಪ್ರಾರಂಭವಾಗುತ್ತವೆ.
ಆದ್ದರಿಂದ ಸಾಮಾನ್ಯವಾಗಿ ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡುವ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಜ್ವರ ರೋಗಿಗಳಿಂದ ರಕ್ತಲೇಪನಗಳನ್ನು ಸಂಗ್ರಹಿಸಿ ಶಂಕಿತ ಪ್ರಕರಣಗಳನ್ನು ಕಂಡುಬಂದಲ್ಲಿ ನಿಯಂತ್ರಣಕ್ಕೆ ವಯಸ್ಸಿಗನುಗುಣವಾಗಿ ಕ್ಲೋರೋಕ್ವಿನ್ ಮಾತ್ರೆಗಳನ್ನು ನಿಡುತ್ತಾರೆ.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳ ಜ್ವರ ಚಿಕಿತ್ಸಾ ಕೇಂದ್ರಗಳಲ್ಲೂ ಸಹ ರಕ್ತ ಲೇಪನಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು.
ಮಲೇರಿಯ ರೋಗ ಸೋಂಕಿತ ಹೆಣ್ಣು ಆನಾಪಿಲಿಸ್ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣ ಅತಿ ಮುಖ್ಯವಾಗಿರುತ್ತದೆ. ಇವುಗಳ ನಿಯಂತ್ರಣಕ್ಕೆ ಕ್ರಮವಹಿಸಲು ಕೋರಿದ್ದಾರೆ.
ಒಳಾಂಗಣ ಕೀಟನಾಶಕ ಸಿಂಪಡಣೆ, ಧೂಮೀಕರಣ ಲಾರ್ವಾನಾಶಕ ಕೀಟನಾಶಕಗಳ ಬಳಕೆ ಮುಂತಾದವುಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. ಲಾರ್ವಾ ನಾಶಕ್ಕಾಗಿ ಜೈವಿಕ ಕ್ರಮವಾಗಿ ಲಾರ್ವಾಹಾನಿ ಮೀನುಗಳನ್ನು ಮತ್ತು ಬ್ಯಾಕ್ಟೀರಿಯಗಳನ್ನು ಅಭಿವೃದ್ದಿ ಪಡಿಸಿ ರೋಗವಾಹಕಗಳ ನಿಯಂತ್ರಣ ಮಾಡುವುದು. ಕೀಟನಾಶಕ, ಸೊಳ್ಳೆಪರದೆಯ ಉಪಯೋಗ, ಸೋಳ್ಳೆ ಬತ್ತಿ, ಬೇವಿನ ಸೊಪ್ಪು ಹೊಗೆ ಹಾಕುವುದು, ಕಿಟಕಿಗಳಿಗೆ ಮೆಶ್ ಅಳವಡಿಕೆ ಸೊಳ್ಳೆ ನಿರೋಧಕ ಲೇಪನಗಳು ಇತ್ಯಾದಿಗಳ ಬಳಕೆಯಿಂದ ಸೊಳ್ಳೆ ಕಡತದಿಂದ ಪಾರಾಗಬೇಕು.ಜೊತೆಯಲ್ಲಿ ಪರಿಸರ ಸ್ವಚ್ಚತೆ ಕಾಪಾಡುವುದರ ಮೂಲಕ ರೋಗ ಹರಡದಂತೆ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.