ಮಲೇಬೆನ್ನೂರು- ಬಸವಾಪಟ್ಟಣ ಭದ್ರನಾಲಾ ವಿಭಾಗ ನಾಲಾ ಕಚೇರಿಗಳ ಸ್ಥಳಾಂತರಕ್ಕೆ ವಿರೋಧ

ದಾವಣಗೆರೆ.ಡಿ.೪; ಭದ್ರಾ ಅಚ್ಚುಕಟ್ಟು ಕೊನೆಭಾಗದಲ್ಲಿರುವ ಮಲೇಬೆನ್ನೂರಿನ ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು  ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಳಿಸಲು ಹೊನ್ನಾಳಿ ಶಾಸಕರು ಮುಂದಾಗಿದ್ದಾರೆ ಇದರಿಂದ ಸಾಕಷ್ಟು ಅನಾನುಕೂಲವಾಗಲಿದೆ ಎಂದು
ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ಅವರು ಇದಲ್ಲದೇ ಬಸವಾಪಟ್ಟಣ ಉಪವಿಭಾಗ ಕಚೇರಿಯನ್ನು ಹೊನ್ನಾಳಿಯ ಸಾಸ್ವೇಹಳ್ಳಿಗೆ ಸ್ಥಳಾಂತರ ಮಾಡಲು ಸರ್ಕಾರದ ಮಟ್ಟದಲ್ಲಿ ಪತ್ರವ್ಯವಹಾರ ಮಾಡಿದ್ದಾರೆ ಆದರೆ ಸ್ಥಳಾಂತರದಿಂದ ಸಾಕಷ್ಟು ಅನಾನುಕೂಲವಾಗಲಿದೆ.ಮಲೇಬೆನ್ನೂರು ಹಾಗೂ ಬಸವಾಪಟ್ಟಣದ ಕಚೇರಿಗಳು ಸುಮಾರು ೬೦ ವರ್ಷದಿಂದ ಕಾರ್ಯನಿರ್ವಹಣೆ ಮಾಡುತ್ತಿವೆ.ಮಲೇಬೆನ್ನೂರು ಶಾಖಾ ನಾಲೆ 23734 ಹೆಕ್ಟೇರ್‌ , ಆನ್ವೇರಿ ಶಾಖಾ ನಾಲೆ 6319 ಹೆಕ್ಟೇರ್‌ ಮತ್ತು ಟಿ.ಬಿ. ಕೆರೆ ಪಿಕಪ್ ಯೋಜನೆಯ 4280 ಹೆಕ್ಟೇರ್‌ ಅಚ್ಚುಕಟ್ಟು ಒಟ್ಟು 34373 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು ಇದರಲ್ಲಿ ಹೊನ್ನಾಳ ತಾಲ್ಲೂಕಿಗೆ ಕೇವಲ 8842 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವು ಬರುತ್ತದೆ . ಕೊನೆಯ ಭಾಗದ ಸುಮಾರು 20-25 ಹಳ್ಳಿಗಳು ಬರುತ್ತಿದ್ದು , ರೈತರುಗಳು ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಮಯಕ್ಕೆ ಸರಿಯಾಗಿ ಕಚೇರಿಗೆ ಭೇಟಿ ನೀಡಲು ಈ ವಿಭಾಗ ಕಛೇರಿ ಮತ್ತು ಬಸವಾಪಟ್ಟಣ ಉಪವಿಭಾಗ ಕಛೇರಿ ಹತ್ತಿರವಾಗಿರುತ್ತದೆ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯು ಕೇವಲ 30 ಕಿ.ಮೀ ಆಗುತ್ತದೆ . ಆದರೆ , ಹೊನ್ನಾಳಿಯಿಂದ 60 ಕಿ.ಮೀ ಆಗುತ್ತದೆ.ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ಅಚ್ಚುಕಟ್ಟುಗಳಿಗೆ ನೀರನ್ನು ಸಮರ್ಪಕವಾಗಿ ವಿತರಿಸಲು ಅನುಕೂಲವಾಗುವಂತೆ ಕೋಮಾರನಹಳ್ಳಿ ಅಕ್ವೊಡೆಕ್ಟ್  ಬಳಿ ನಿಗದಿತ ಗೇಜ್ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಇರುವುದರಿಂದ ಮತ್ತು ಮಹಾಮಂಡಳದ ಯಾವುದೇ ತುರ್ತು ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರಲು ಈ ವಿಭಾಗದ ಕಚೇರಿ ಅನುಕೂಲವಾಗಿದೆ. ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಂಡಲ್ಲಿ ರೈತರು ಮತ್ತು ನೀರು ಬಳಕೆದಾರರ ಸಹಕರ ಸಂಘಗಳು ಹೋರಾಟಕ್ಕಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಜಿ ನಾಗರಾಜ್,ದೇವೇಂದ್ರಪ್ಪ,ಎ.ಬಿ ಕರಿಯಪ್ಪ,ಬಿ.ಜಿ ವಿಶ್ವಾಂಬರ ಇದ್ದರು.