ಮಲೆ ಮಹದೇಶ್ವರ ಬೆಟ್ಟದಲ್ಲಿ 101ನೇ ಸ್ವಸಹಾಯ ಸಂಘ ಉದ್ಘಾಟನೆ

ಸಂಜೆವಾಣಿ ವಾರ್ತೆ
ಹನೂರು: ಜ.20:- ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆ ಸಂಸ್ಥೆಯು ಗುಡ್ಡಗಾಡು ಪ್ರದೇಶದಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಈ ಭಾಗದ ಜನರ ಶೈಕ್ಷಣಿಕ ಪ್ರಗತಿಗೆ ಉತ್ತಮ ಸೇವೆ ಸಲ್ಲಿಸುವಂತೆ ಆಗಬೇಕು ಎಂದು ಸಾಲೂರು ಬೃಹನ್ಮಠ ಅಧ್ಯಕ್ಷರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ ವಲಯ ಮತ್ತು 101ನೇ ಸ್ವಸಹಾಯ ಸಂಘ ಉದ್ಘಾಟನೆ ಹಾಗೂ ಅನುದಾನ ವಿತರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಹೊತ್ತನ್ನು ನೀಡಬೇಕು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಸ್ವಸಹಾಯಕ ಸಂಘಗಳ ಮೂಲಕ ಸಾಲ ಸೌಲಭ್ಯ ಹಲವಾರು ಯೋಜನೆಗಳನ್ನು ನೀಡಿ ಸಾವಿರಾರು ಕುಟುಂಬಗಳಿಗೆ ಆಧಾರ ಸ್ಥಂಭವಾಗಿದೆ. ಸಂಘದ ಮೂಲಕ ಶಾಲೆ ಸೌಲಭ್ಯಗಳನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಮೂಲಕಮಹಿಳೆಯರು ಸಬಲೀಕರಣವಾಗಿ ಅಭಿವೃದ್ಧಿ ಹೊಂದಬೇಕು.
ಹನೂರು ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯರು ಮತ್ತು ಸಮಾಜದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳುವಂತೆ ಹಾಗೂ “ಮರದ ಹಣ್ಣು ಮರಕಲ್ಲವೆಂಬಂತೆ” ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಧರ್ಮಸ್ಥಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಎಲ್.ಎಚ್ ಮಂಜುನಾಥ್ ಅವರು ಮಾತನಾಡಿ ಸಾಲೂರು ಶ್ರೀಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದರ ಜೊತೆಗೆ ದಾಸೋಹವನ್ನು ನಡೆಸಿಕೊಂಡು ಭಕ್ತಾದಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡು ಬಂದಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಗುಡ್ಡಗಾಡು ಪ್ರದೇಶದಲ್ಲಿನ ಮಕ್ಕಳ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸುವಲ್ಲಿ ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮೂಲಕ ಆರು ಲಕ್ಷ, ಐವತ್ತು ಸಾವಿರ ಸ್ವಸಹಾಯಕ ಸಂಘಗಳು ಇದ್ದು 60 ಲಕ್ಷ ಕುಟುಂಬಗಳಿಗೆ ಸಾಲ ಸೌಲಭ್ಯ ದೊರಕಿಸಿಕೊಡುವ ಮೂಲಕ ಪ್ರತಿಯೊಬ್ಬರು ಆರ್ಥಿಕವಾಗಿ ಸದೃಢರಾಗಿ ಅಭಿವೃದ್ಧಿ ಹೊಂದಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ.
ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಿಂದ ಶಾಲೆ ಸ್ವಚ್ಛತೆ ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸುವುದು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಇಂತಹ ಹಲವಾರು ಸೇವೆಗಳನ್ನು ನಮ್ಮ ಸಂಘ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ.
ಸ್ವಸಹಾಯ ಸಂಘದಿಂದ ಸದಸ್ಯರಿಗೆ ಆತ್ಮಬಲ ಮತ್ತು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದು ಕುಟುಂಬದ ಅಭಿವೃದ್ಧಿಗೆ ಮಹಿಳೆಯರು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದು ಎಲ್ಲರೂ ಸ್ವಸಹಾಯ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಯಮ ಪಾಲನೆ ಯೊಂದಿಗೆ ಆರ್ಥಿಕ ಶಿಸ್ತನ್ನು ಸಹ ಬೆಳೆಸಿಕೊಂಡು ತಮ್ಮ ಹೇಳಿಗೆ ಶ್ರಮಿಸಬೇಕೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂ. ಪಿಡಿಒ ಕಿರಣ್ ಕುಮಾರ್, ಅಧ್ಯಕ್ಷೆ ಅರ್ಚನಾ, ಮೈಸೂರು ಪ್ರಾದೇಶಿಕ ವಿಭಾಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಚಪ್ಪ, ಜಿಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಿರ್ದೇಶಕಿ ಲತಾಬಂಗೇರಾ.ಹನೂರು ತಾಲೂಕು ಯೋಜನಾಧಿಕಾರಿ ಪ್ರವೀಣ್ ಕುಮಾರ್, ತೆರಕಣಾಂಬಿ ಯೋಜನಾಧಿಕಾರಿ ದಿನೇಶ್, ಯಳಂದೂರು ಪ್ರವೀಣ್ ಕುಮಾರ್, ಕೊಳ್ಳೇಗಾಲ ದೀನ್ರಾಜು ಶೆಟ್ಟಿ, ಗುಂಡ್ಲುಪೇಟೆ ಚಂದ್ರಶೇಖರ್, ಮೇಲ್ವಿಚಾರಕರಾದ ಎನ್.ಕೆ ಸುರೇಶ್, ಸಂಧ್ಯಾ, ವಸಂತ, ಅಶೋಕ್, ರಾಣಿ ಮಂಜುನಾಥ ಶಿವರಾಜು ಸೇರಿದಂತೆ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಮಹಿಳೆಯರು ಹಾಜರಿದ್ದರು.