ಮಲೆಯೂರಿನಲ್ಲಿ ಬಿಎಂಸಿ ಕೇಂದ್ರ, ಸಭಾಂಗಣ ಉದ್ಘಾಟನೆ

ಚಾಮರಾಜನಗರ, ನ.07:- ಮಲೆಯೂರು ಗ್ರಾಮದ ಅಭಿವೃದ್ದಿಯಲ್ಲಿ ಶಾಸಕರಾಗಿದ್ದ ದಿ. ಎಂ.ಸಿ. ಬಸಪ್ಪ ಮತ್ತು ಮುಖಂಡರಾದ ದಿ. ಎಂ.ಸಿ. ಸ್ವಾಮಿ ಅವರ ಕೊಡುಗೆ ಅಪಾರವಾಗಿದೆ. ಇವರ ಸೇವೆಯ ಮೂಲಕ ಗ್ರಾಮವನ್ನು ಗುರುತಿಸುವಷ್ಟ ಖ್ಯಾತಿಯನ್ನು ಪಡೆದುಕೊಂಡಿದ್ದರು. ಬಿಎಂಸಿ ಕೇಂದ್ರ ಹಾಗೂ ಸಭಾಂಗಣ ಈ ಭಾಗದ ರೈತರ ಪ್ರಗತಿಗೆ ಪೂರಕವಾಗಲಿ ಎಂದು ಚಾಮುಲ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.
ತಾಲೂಕಿನ ಮಲೆಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕೇಂದ್ರ ಹಾಗೂ ಸಭಾಂಗಣವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಮಲೆಯೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬಿಎಂಸಿ ಕೇಂದ್ರ ಹಾಗೂ ಸಭಾಂಗಣವನ್ನು ಬಹಳ ಅಚ್ಚುಕಟ್ಟಾಗಿ ಚಾಮುಲ್ ನಿರ್ದೇಶಕರಾಗಿರುವ ಮಲೆಯೂರು ರವಿಶಂಕರ್ ಅವರು ಶ್ರಮದಿಂದ ನಿರ್ಮಾಣ ಮಾಡಿದ್ದಾರೆ. ಅವರ ಕುಟುಂಬದವರ ಹಾದಿಯಲ್ಲಿಯೇ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡು ಹೈನುಗಾರಿಕೆಯಲ್ಲಿ ಹೆಚ್ಚು ಪ್ರಗತಿಯನ್ನು ಹೊಂದಿದ್ದಾರೆ. ಕಳೆದ 11 ವರ್ಷದಿಂದ ಗ್ರಾಮದ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಂಘದ ಬೆಳೆವಣಿಗೆಗೆ ಕಾರಣರಾಗಿದ್ದಾರೆ ಎಂದರು.
ಗಡಿ ಜಿಲ್ಲೆಯಲ್ಲಿ ಹೈನುಗಾರಿಕೆ ಹೆಚ್ಚು ಬಲಗೊಳ್ಳಲು ಅಂದು ಎಚ್.ಎಸ್. ಮಹದೇವಪ್ರಸಾದ್ ಅವರು ಹಾಕಿಕೊಟ್ಟ ಭದ್ರ ಬುನಾದಿ ಕಾರಣವಾಗಿದೆ. ಕೊರೋನಾ, ಲಾಕ್‍ಡೌನ್ ಸಂಕಷ್ಟದ ವೇಳೆಯಲ್ಲೂ ರೈತರು ನಿರಂತಕವಾಗಿ ಡೇರಿಗಳಿಗೆ ಹಾಲು ಸರಬರಾಜು ಮಾಡಿ ಪ್ರತಿ ವಾರವು ಸಹ ಹಣ ಪಡೆದುಕೊಳ್ಳುತ್ತಿದ್ದರು. ಪಟ್ಟಣ ಸೇರಿದ್ದ ಅನೇಕರು ಮತ್ತೆ ಗ್ರಾಮಕ್ಕೆ ಬಂದು ಹೈನುಗಾರಿಕೆಯನ್ನು ಅವಲಂಬಿಸಿ ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ.80 ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ನಮ್ಮ ಜಿಲ್ಲೆಯ ಹಾಲು ಭೂತಾನ್, ಅಸ್ಸಾಂ, ತೆಲಂಗಾಣ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಪ್ರತಿ ದಿನ 2.60 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಪೌಡರ್ ಹಾಗೂ ಟಾಟ್ರಾ ಪ್ಯಾಕೆಟ್ ರೂಪದಲ್ಲಿ ವಿದೇಶಗಳು ಹಾಗೂ ಅಕ್ಕಪಕ್ಕದ ರಾಜ್ಯಗಳಿಗೆ ರಪ್ತು ಆಗುತ್ತಿದೆ. ಆಂಧ್ರ ಪ್ರದೇಶದ ಕ್ಷೀರ ಭಾಗ್ಯ ಯೋಜನೆಗೆ ನಮ್ಮ ಒಕ್ಕೂಟದ ಹಾಲು ಹೋಗುತ್ತಿದೆ ಎಂಬುದೇ ಹೆಮ್ಮೆ ಎಂದು ನಂಜುಂಡಪ್ರಸಾದ್ ತಿಳಿಸಿದರು.
ಚಾಮುಲ್ ನಿರ್ದೇಶಕ ಮಲೆಯೂರು ರವಿಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಟ್ಟು ನಿಶ್ವಿತ, ಸಾವು ಖಚಿತವಾಗಿದ್ದು, ಈ ಅವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕಾಗಿದೆ. ಯುವ ನಟ ಪುನೀತ್‍ರಾಜಕುಮಾರ್ ಅವರ ನಿಧನ ಬಹಳ ಅಘಾತವನ್ನು ತಂದಿದೆ. ಅವರ ಅಂತಿಮ ದರ್ಶನಕ್ಕೆ 25 ಲಕ್ಷ ಜನರು ಆಗಮಿಸಿದ್ದರು ಎಂಬುವುದೇ ಅದ್ಬುತ. ಅಂಥ ಸಾಧನೆಯನ್ನು ಮಾಡಿರುವ ಪುನೀತ್ ನಮ್ಮೊಂದಿಗಿಲ್ಲ. ಅದರೆ ಅವರ ಸೇವೆ ಈಗ ಮಾತನಾಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರು ಸಹ ಸೇವಾ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕು ಎಂದರು.
ನಮ್ಮ ಜಿಲ್ಲೆ ಈ ಹಿಂದೆ ರೇಷ್ಮೆಗೆ ಹೆಚ್ಚು ಪ್ರಖ್ಯಾತಿಯನ್ನು ಪಡೆದಿತ್ತು. ಈಗ ಹಾಲು ಉತ್ಪಾದನೆ ಮತ್ತು ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಅಂತರರಾಷ್ಟ್ರೀಯ ಗ್ಯಾಟ್ ಒಪ್ಪಂದದಿಂದಾಗಿ ರೇಷ್ಮೆ ಉದ್ಯಮ ನೆಲಗಚ್ಚಿತ್ತು. ತದನಂತರ ಹೈನುಗಾರಿಕೆಯನ್ನು ಅವಲಂಬಿಸಿ ನಮ್ಮ ರೈತರು ಸ್ವಾವಲಂಬಿ ಜೀವನ ನಡೆಸಲು ಆರಂಭಿಸಿದ್ದಾರೆ. ಈಗ ಮತ್ತೇ ಹಾಲು ಮುಕ್ತ ಮಾರುಕಟ್ಟೆಗೆ ಅವಕಾಶ ಮಾಡಿಕೊಟ್ಟರೆ, ಹೊರ ದೇಶದ ಹಾಲು ಲೀಟರ್‍ಗೆ 18 ರೂ. ನಲ್ಲಿ ದೊರೆಯಲಾರಂಬಿಸುತ್ತದೆ. ಹೈನುಗಾರ ರೈತರು ತೊಂದರೆಗೆ ಸಿಲುಕಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆಯಾಗಿ ಈ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ಪ್ರಚಾರ ಹಾಗು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ನಮ್ಮ ಪ್ರತಿನಿಧಿಗಳು ಚರ್ಚೆ ಮಾಡಿ. ಇಂಥ ಒಪ್ಪಂದಗಳಿಗೆ ಅವಕಾಶ ನೀಡಬಾರದು ಎಂದು ರವಿಶಂಕರ್ ಮನವಿ ಮಾಡಿದರು.
ಚಾಮುಲ್ ನಿರ್ದೇಶಕ ಕಿಲಗೆರೆ ಬಸವರಾಜು ಮಾತನಾಡಿ, ಮಲೆಯೂರಿಗೆ ಬಿಎಂಸಿ ಕೇಂದ್ರ ಸ್ಥಾಪನೆಯಲ್ಲಿ ರವಿಶಂಕರ್ ಶ್ರಮ ಬಹಳ ಇದೆ. 30ನೇ ಬಿಎಂಸಿ ಕೇಂದ್ರವನ್ನು ಉದ್ಘಾಟನೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಹೆಚ್ಚು ಬಿಎಂಸಿ ಕೇಂದ್ರವನ್ನು ಗುಣಮಟ್ಟದ ಹಾಲು ಶೇಖರಣೆ ನಮ್ಮ ಗುರಿಯಾಗಿದೆ. ರೈತರು ಸಹ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕರಾದ ನಂಜುಂಡಸ್ವಾಮಿ, ಶಶಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಮೂರ್ತಿ ಮಾತನಾಡಿದರು. ವೇದಿಕೆಯಲ್ಲಿ ಮಲೆಯೂರು ಗ್ರಾ.,ಪಂ. ಅಧ್ಯಕ್ಷ ಪುಟ್ಟಸ್ವಾಮಿ, ಸಹಕಾರ ಯೂನಿಯನ್ ಅಧ್ಯಕ್ಷ ಎಂ.ಎಂ. ನಾಗರಾಜು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲೂಕು ಸಂಯೋಜಕ ಹರೀಶ್ ಶೆಟ್ಟಿ, ನೌಕರರ ಸಂಘದ ಅಧ್ಯಕ್ಷ ಪಿ. ಶಾಂತು, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಒಕ್ಕೂಟದ ಕೆ.ರಾಜಕುಮಾರ್, ಡಾ. ಅಕ್ಕಲಪ್ಪರೆಡ್ಡಿ, ಟಿ. ಗೋವಿಂದರಾಜು, ಜಿ. ಪ್ರಭು, ಕೆ.ಎಸ್. ಗಿರೀಶ್, ಎಚ್.ಪಿ. ಶ್ಯಾಂಸುಂದರ್, ಸಂಘದ ಉಪಾಧ್ಯಕ್ಷ ಎಂ.ಎಸ್. ಮಹದೇವಪ್ಪ, ನಿರ್ದೇಶಕರಾದ ಬಸವರಾಜು, ಮಹದೇವಪ್ಪ, ಸ್ವಾಮಿ, ನಂಜಪ್ಪ, ರಾಜಪ್ಪ, ನಂಜುಂಡನಾಯಕ್, ಮಲ್ಲಶೆಟ್ಟಿ, ಬೆಳ್ಳಶೆಟ್ಟಿ, ಪುಟ್ಟಸ್ವಾಮಿ, ನೀಲಮ್ಮ, ತಾಯಮ್ಮ, ಸಿಇಓ ಎಂ.ಎಸ್. ಮಹದೇವಪ್ಪ, ನೌಕರರಾದ ಶಿವಕುಮಾರ್, ಶಶಾಂಕ್, ವಿಜಯಕುಮಾರ್, ಗಿರೀಶ್ ಮೊದಲಾದವರು ಇದ್ದರು.