ಮಲೆಮಹದೇಶ್ವರ ಬೆಟ್ಟದಿಂದ ಬಿಜೆಪಿ ರಥಯಾತ್ರೆ

ಹನೂರು: ಫೆ.28:- ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಬೆನ್ನಲ್ಲೇ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸಲಿದ್ದು ರಾಜ್ಯದ ದಕ್ಷಿಣ ತುಟ್ಟ ತುದಿ ಮಲೆಮಹದೇಶ್ವರ ಬೆಟ್ಟದಿಂದ ಯಾತ್ರೆ ಆರಂಭವಾಗಲಿದೆ.
ಮಾ.1 ರಂದು ಪ್ರಮುಖ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಚಾಲನೆ ನೀಡಲಿದ್ದು ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರುಗಳು, ಸಂಸದರು ಸಾಥ್ ಕೊಡಲಿದ್ದಾರೆ.
ಸೋಲಿಗರೊಟ್ಟಿಗೆ ಸಂವಾದ, ರೋಡ್ ಶೋ, ಸಮಾವೇಶ:
ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಿ ಯಾತ್ರೆಗೆ ನಡ್ಡ ಚಾಲನೆ ಕೊಡಲಿದ್ದಾರೆ. ಬಳಿಕ, ಸೋಲಿಗರು ಹಾಗೂ ಬೇಡಗಂಪಣ ಜನಾಂಗದವರೊಂದಿವೆ ಸಂವಾದ ನಡೆಯಲಿದ್ದು ಅದಾದ ನಂತರ ಸಾಲೂರು ಮಠಕ್ಕೆ ಭೇಟಿ ಕೊಡಲಿದ್ದಾರೆ.
ಮಧ್ಯಾಹ್ನ 2 ರ ವೇಳೆಗೆ ರಾಜ್ಯ ನಾಯಕರು ಹನೂರಿನಲ್ಲಿ ಬಹಿರಂಗ ಸಮಾವೇಶ ನಡೆಸಿ ಬಳಿಕ ಕೊಳ್ಳೇಗಾಲದಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಮಾವೇಶ ನಡೆಯಲಿದೆ.
ಚಾಮರಾಜನಗರದಲ್ಲಿ ಮಾ.2 ರಂದು ನಗರದ ಆದಿಶಕ್ತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಯಲಿದ್ದು ಮಧ್ಯಾಹ್ನ ಗುಂಡ್ಲುಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ರಾಜ್ಯದಲ್ಲಿ 4 ತಂಡಗಳು ಯಾತ್ರೆ ನಡೆಸಲಿದ್ದು ಗಡಿಜಿಲ್ಲೆಯಲ್ಲೇ ಮೊದಲ ಯಾತ್ರೆ ನಡೆಯಲಿರುವುದು ವಿಶೇಷ. ಇನ್ನು, ಈಗಾಗಲೇ ಸಮಾವೇಶ ಸ್ಥಳಗಳಲ್ಲಿ ಬಿಜೆಪಿ ಪಡೆ ಸಕಲ ತಯಾರಿ ನಡೆಸುತ್ತಿದೆ.