ಮಲೆಮಹದೇಶ್ವರ ಬೆಟ್ಟದಲ್ಲಿ ಸರಳ ವಿಜಯ ದಶಮಿ ತೆಪ್ಪೋತ್ಸವ

ಹನೂರು, ಅ.27: ಇತಿಹಾಸದಲ್ಲೇ ಮೊದಲ ಬಾರಿಗೆ ಭಕ್ತರು ಹಾಗೂ ಸಾರ್ವಜನಿಕರಿಲ್ಲದೇ ಸರಳ ವಿಜಯ ದಶಮಿ ತೆಪ್ಪೋತ್ಸವ ಮಲೆಮಹದೇಶ್ವರ ಬೆಟ್ಟದಲ್ಲಿ ನೆನ್ನೆ ರಾತ್ರಿ ಜರುಗಿದೆ.
ಪ್ರತಿ ದಸರಾ ಸಮಯದಲ್ಲಿ ರಾಜ್ಯ ಮತ್ತು ಅಂತರಾಜ್ಯದಿಂದ ಲಕ್ಷಾಂತರ ಭಕ್ತರು ಮಲೆಮಾದಪ್ಪನ ಸುಕ್ಷೇತ್ರದಲ್ಲಿ ಜಮಾವಣೆಗೊಂಡು ವಿವಿಧ ಧಾರ್ಮಿಕ ಪೂಜೆ ಮತ್ತು ಸೇವೆಗಳನ್ನು ಕೈಗೊಳ್ಳುತ್ತಿದ್ದರು. ಈ ಬಾರಿ ಕೊರೊನಾ ಸೋಂಕಿನ ಹರಡುವಿಕೆ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಭಕ್ತರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿರುವ ಹಿನ್ನಲೆಯಲ್ಲಿ ಪ್ರಪ್ರಥಮ ಬಾರಿಗೆ ಭಕ್ತರಿಲ್ಲದೇ ದಸರಾ ವಿಜಯದಶಮಿ ತೆಪ್ಪೋತ್ಸವ ಸೇರಿದಂತೆ ವಿವಿಧ ಪೂಜೆ, ಸೇವೆಗಳನ್ನು ಸರಳವಾಗಿ ನೆರವೇರಿಸಲಾಯಿತು.
ಸ್ಥಳಿಯ ಭಕ್ತರು ಮತ್ತು ಸಾರ್ವಜನಿಕರ ಪಾಲಿಗೆ ಮರೆಯಲಾಗದ ದಿನ: ಮಲೆಮಹದೇಶ್ವರ ಬೆಟ್ಟದಲ್ಲಿನ ಸಾರ್ವಜನಿಕರು ಮತ್ತು ಭಕ್ತರು ಜಾತ್ರೆ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಾದಪ್ಪನ ಪುಣ್ಯ ಕ್ಷೇತ್ರದಲ್ಲಿ ನೆಲೆಗೊಂಡಿದ್ದರೂ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರಿಂದ ಕಾಲಿಡಲು ಸ್ಥಳವಿಲ್ಲದ ಕಾರಣ ಸ್ಥಳಿಯರು ಇಂತಹ ಜನ ಜಂಗುಳಿ ಸಮಯದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಬದಲಾಗಿ ಜನ ಜಂಗುಳಿ ಇಲ್ಲದ ಸಮಯದಲ್ಲಿ ದೇವರ ದರ್ಶನ ಹಾಗೂ ಇನ್ನಿತರೆ ಪೂಜೆ ಮತ್ತು ಸೇವೆಗಳನ್ನು ಕೈಗೊಳ್ಳುತ್ತಿದ್ದರು. ಅದರಲ್ಲೂ ಅದ್ಧೂರಿ ಮತ್ತು ಅತ್ಯಂತ ಆಕರ್ಷಿಣಿಯವಾಗಿ ಜರುಗುತ್ತಿದ್ದ ತೆಪ್ಪೋತ್ಸವನ್ನು ನೋಡುವ ಇಂಗಿತವಿದ್ದರೂ ಕೂಡ ಅಪಾರ ಸಂಖ್ಯೆಯ ಭಕ್ತರಿಂದ ತೆಪ್ಪೋತ್ಸವವನ್ನು ನೋಡಲು ಅವಕಾಶ ಇರುತ್ತಿರಲಿಲ್ಲ. ಆದರೆ ಈ ಬಾರಿ ಭಕ್ತರು ಇಲ್ಲದ ಕಾರಣ ಮಲೆಮಾದಪ್ಪನ ಬೆಟ್ಟದ ನಿವಾಸಿಗಳು ದೇವಾಲಯದ ಚರಿತ್ರೆಯಲ್ಲೇ ಇಂತಹದೊಂದು ದಿನದಲ್ಲಿ ಮುಕ್ತವಾಗಿ ತೆಪ್ಪೋತ್ಸವವನ್ನು ಕಣ್‍ತುಂಬಿಕೊಂಡಿರುವುದು ಹಾಗೂ ಕೊರೊನಾ ಸೋಂಕು ಹರಡುವ ಭೀತಿಯಿಂದ ಭಕ್ತರು ಇಲ್ಲದೇ ಇರುವುದನ್ನು ಕಂಡಿರುವುದು ಇದೇ ಮೊದಲು ಎನ್ನುವ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.