ಮಲೆಮಹದೇಶ್ವರ ಬೆಟ್ಟದಲ್ಲಿ ಲಡ್ಡು ಜೊತೆ ಭಕ್ತನಿಗೆ 2.90 ಲಕ್ಷ ಹಣ ವಿದ್ದ ಬ್ಯಾಗ್ ನೀಡಿದ ಸಿಬ್ಬಂದಿ

ಹನೂರು, ಜು.29:- ಭೀಮನ ಅಮವಾಸ್ಯೆ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡೇ ಹರಿದು ಬಂದಿದೆ. ಈ ವೇಳೆ ಲಾಡು ಪ್ರಸಾದ್ ಹಂಚುವ ಕೌಂಟರ್ ನಲ್ಲಿ ಭಾರಿ ಎಡವಟ್ಟು ನಡೆದು ಹೋಗಿದೆ.
ಹೌದು ಪ್ರಸಿದ್ಧ ತೀರ್ಥಕ್ಷೇತ್ರ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ರಾಜಗೋಪುರದ ಬಳಿ ವಿಶೇಷ ದರ್ಶನ ಕೌಂಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನೊಬ್ಬ ಕಣ್ತಪ್ಪಿನಿಂದ ಲಾಡು ಪ್ರಸಾದದ ಬ್ಯಾಗ್ನ ಜೊತೆಗೆ 2.91 ಲಕ್ಷ ರೂ ಹಣವನ್ನೂ ಭಕ್ತನೋರ್ವನಿಗೆ ನೀಡಿರುವ ಘಟನೆ ನಡೆದಿದೆ.
ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನೂ ಸಹ ಇಟ್ಟಿದ್ದ ಕಾರಣ ಹಣಸಹಿತ ಬ್ಯಾಗ್ ಅನ್ನು ಭಕ್ತನೋರ್ವನಿಗೆ ನೀಡಿ ಎಡವಟ್ಟು ಮಾಡಿದ್ದಾರೆ. ಹಣ ಕಾಣಿಸದಿದ್ದರಿಂದ ಹುಡುಕಾಟ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿಯ ಕಣ್ತಪ್ಪಿನಿಂದ ದುಡ್ಡು ಲಾಡು ಜೊತೆ ಹೋಗಿರುವುದು ತಿಳಿದು ಬಂದಿದೆ. ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.