ಮಲೆನಾಡಿನಲ್ಲಿ ಮಳೆ; ರೆಡ್ ಅಲರ್ಟ್

ಚಿಕ್ಕಮಗಳೂರು, ಸೆ. ೧೨: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸದೆ.
ಆದರೆ ನಿನ್ನೆ ಜಿಲ್ಲಾಯಾದ್ಯಂತ ಮೋಡಕವಿದ ವಾತಾವರಣ ಇದ್ದು, ಮಲೆನಾಡು ಭಾಗದ ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕಿನ ಚಾರ್ಮಾಡಿ, ಕೊಟ್ಟಿಗೆಹಾರ ಭಾಗದಲ್ಲಿ ಭಾರೀ ಮಳೆಯಾಗಿದೆ. ಉಳಿದಂತೆ ಕೊಪ್ಪ, ನರಸಿಂಹರಾಜಪುರ, ಶೃಂಗೆರಿ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣೆ ಮಳೆಯಾಗಿದ್ದು ಮಧ್ಯಾಹ್ನ, ಸಂಜೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಈ ನಡುವೆ ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ನಗರ ಸಮೀಪದ ಹಿರೇಮಗಳೂರು ದೊಡ್ಡ ಕೆರೆಯ ಏರಿ ಒಡೆಯುವ ಭೀತಿ ಎದುರಾಗಿದೆ.
ಕೆಲವು ಕಡೆ ಕಳಪೆ ಕಾಮಗಾರಿಯಾಗಿದ್ದು ಚಿಕ್ಕಮಗಳೂರು ಹೊರವಲಯದಲ್ಲಿರುವ ಹಿರೇಮಗಳೂರು ಕೆರೆ ಏರಿ ಮೇಲಿರುವ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಬಿಟ್ಟಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಕೆರೆ ಒಡೆದರೆ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ಸಮೀಪದ ಗ್ರಾಮಗಳ ನೂರಾರು ರೈತರು ಆತಂಕದಲ್ಲಿದ್ದಾರೆ.
ಬಿರುಕು ಕಾಣಿಸಿಕೊಂಡಿರುವ ರಸ್ತೆಯಲ್ಲಿ ಓಡಾಡಲು ಜನರು, ವಾಹನ ಚಾಲಕರು ಭಯ ಪಡುತ್ತಿದ್ದಾರೆ.
ಈ ರಸ್ತೆಯನ್ನು ಕಳೆದ ೧ ವರ್ಷದ ಹಿಂದೆ ನಿರ್ಮಿಸಲಾಗಿದ್ದು, ಸಿ.ಟಿ. ರವಿ ಸಂಬಂಧಿಯು ಗುತ್ತಿಗೆದಾರರೂ ಆಗಿರುವ ಸುದರ್ಶನ್ ಎಂಬುವರು ನಿರ್ಮಿಸಿದ್ದಾರೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಚಿವ ಸಿ.ಟಿ.ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.