ಮಲೆನಾಡಲ್ಲಿ ಮೋದಿ ಅಬ್ಬರ ಹರಿದು ಬಂದ ಜನಸ್ತೋಮ

ಶಿವಮೊಗ್ಗ,ಮಾ.೧೮- ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮತ ಬೇಟೆ ನಡೆಸಲಿದ್ದಾರೆ. ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದ ಬೆನ್ನಲ್ಲೇ ಕಲ್ಬುರ್ಗಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಪ್ರಧಾನಿ ಇಂದು ಶಿವಮೊಗ್ಗದಲ್ಲೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದಾರೆ. ಪ್ರಧಾನಿ ಭೇಟಿ ಬಿಜೆಪಿ ಪಾಳಯದಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ತುಂಬಿದೆ.
ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿ ಕಳುಹಿಸಿ ಎಂದು ನಾಲ್ಕು ಜಿಲ್ಲೆಗಳ ಮತದಾರರಿಗೆ ಮನವಿ ಮಾಡಿದ್ದಾರೆ.
ನಗರದ ಅಲ್ಲಮ ಅಲ್ಲಮಪ್ರಭು ಮೈದಾನದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಲಕ್ಷಾಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕೈಜೋಡಿಸಿ ಎಂದು ಕರೆ ನೀಡಿದ್ದಾರೆ. ಉಡುಪಿ- ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ ೨೬ ರಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ, ಶಿವಮೊಗ್ಗ ದಾವಣಗೆರೆಯಲ್ಲಿ ರಾಜ್ಯದ ಎರಡನೇ ಹಂತ ಮೇ. ೭ ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬ್ಬರದ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳಾದ ಬಿ.ವೈ ರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗು ಮಾಜಿ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ, ರಾಜ್ಯಾದ್ಯಕ್ಷ ಬಿ,ವೈ ವಿಜಯೇಂದ್ರ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಆಯ್ಕೆ ಮಾಡಿಲ್ಲ.ಪ್ರಧಾನಿ ಮೋದಿ ಶಿವಮೊಗ್ಗ ನಗರಕ್ಕೆ ವಿಶೇಷ ವಿಮಾನಕ್ಕೆ ಆಗಮಿಸಿ ಅಲ್ಲಿಂದ ಸುಮಾರು ೧೪ ಕಿ.ಮೀ ದೂರ ಎಸ್‌ಪಿಜಿ ಬಿಗಿ ಭದ್ರತೆಯಲ್ಲಿ ಕಾರಿನಲ್ಲಿ ಸಂಚಾರ ನಡೆಸಿದರು.ನಗರದ ವಿಮಾನ ನಿಲ್ದಾಣದ ಎನ್.ಆರ್.ಪುರ ರಸ್ತೆಯಿಂದ ಶಿವಮೊಗ್ಗ ಬಿ.ಹೆಚ್.ರಸ್ತೆ, ನೆಹರು ರಸ್ತೆ, ಬೈಪಾಸ್ ರಸ್ತೆ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ, ಸಂಗೊಳ್ಳಿ ರಾಯಣ್ಣ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಬಂದ್ ಆಗಲಿವೆ. ಜನತೆಯ ಟ್ರಾಫಿಕ್ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.
೨೦೨೩ರ ಫೆಬ್ರವರಿ ೨೮ರಂದು ಶಿವಮೊಗ್ಗ ಹೊರವಲಯದ ಸೊಗಾನೆಯಲ್ಲಿ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು ಆದಾದ ಬಳಿಕ ಇದೀಗ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದಾರೆ.
೩ ಲಕ್ಷ ಜನ ಭಾಗಿ
ಇಂದು ಮಧ್ಯಾಹ್ನ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ೩ ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನರೇಂದ್ರ ಮೋದಿ ಭೇಟಿಯಿಂದ ತಮಗೆ ಮತ್ತಷ್ಟು ಬಲ ಬಂದಿದೆ. ಜಿಲ್ಲೆಯಿಂದ ಚುನಾವಣಾ ಪ್ರಚಾರ ಆರಂಭವಾಗಿದೆ ಎಂದರು.
ಸಮಾವೇಶಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ ೨೮ ಕ್ಷೇತ್ರಗಳಲ್ಲೂ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಗಿ ಭದ್ರತೆ
ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಫ್ರೀಡಂ ಪಾರ್ಕ್ ಬಳಿ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ಎರಡು ಗೇಟ್‌ಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ರಸ್ತೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ತೆರಳಲು ಅವಕಾಶ ಮಾಡಿಕೊಡಲಾಗಿದ್ದು, ೧೧ ಗಂಟೆ ಬಳಿಕ ೧೦ ಕಿಮೀ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.