ಮಲೆನಾಡಲ್ಲಿ ಮುಂದುವರಿದ ಮಳೆ : ಡ್ಯಾಂಗಳ ಒಳಹರಿವಿನಲ್ಲಿ ಯಥಾಸ್ಥಿತಿ


ಶಿವಮೊಗ್ಗ, ಸೆ. 5: ಮಲೆನಾಡಲ್ಲಿ ಮಳೆ ಮುಂದುವರಿದಿದೆ. ಶನಿವಾರ ಬೆಳಿಗ್ಗೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಯಿತು.
ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ 11.86 ಮಿಲಿ ಮೀಟರ್ (ಮಿ.ಮೀ.) ಆಗಿದೆ.
ಶಿವಮೊಗ್ಗದಲ್ಲಿ 4.80 ಮಿ.ಮೀ., ಭದ್ರಾವತಿ 5.80 ಮಿ.ಮೀ., ತೀರ್ಥಹಳ್ಳಿ 10.20 ಮಿ.ಮೀ., ಸಾಗರ 1.60 ಮಿ.ಮೀ., ಶಿಕಾರಿಪುರ 16.60 ಮಿ.ಮೀ., ಸೊರಬ 7.40 ಮಿ.ಮೀ. ಹಾಗೂ ಹೊಸನಗರದಲ್ಲಿ 36.60 ಮಿ.ಮೀ. ಮಳೆಯಾಗಿದೆ.
ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1807.05 (ಗರಿಷ್ಠ ಮಟ್ಟ : 1819) ಅಡಿಯಿದೆ. 10,725 ಕ್ಯೂಸೆಕ್ ಒಳಹರಿವಿದ್ದು 4070.44 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಭದ್ರಾ ಡ್ಯಾಂನ ನೀರಿನ ಮಟ್ಟ 183.60 (ಗರಿಷ್ಠ ಮಟ್ಟ : 186) ಅಡಿಯಿದೆ. 6033 ಕ್ಯೂಸೆಕ್ ಒಳಹರಿವಿದ್ದು, 2468 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಉಳಿದಂತೆ ತುಂಗಾ ಜಲಾಶಯದ ಒಳಹರಿವು 9013 ಕ್ಯೂಸೆಕ್ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.