ಮಲದ ಗುಂಡಿಗೆ ಬಿದ್ದು ನಾಲ್ವರು ಬಲಿ

ಲಕ್ನೋ, ಮೇ ೩೦-ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ಮಲದ ಗುಂಡಿಗೆ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ.
ರಾಮನಗರ ಗ್ರಾಮದ ೪೫ ವರ್ಷ ವಯಸ್ಸಿನ ನಂದಕುಮಾರ್ ಎಂಬ ವ್ಯಕ್ತಿಯು ಮಲದ ಗುಂಡಿಯನ್ನು ಸ್ವಚ್ಛಗೊಳಿಸಲು ನೇಮಕಗೊಂಡಿದ್ದ. ಮಲದ ಗುಂಡಿಯನ್ನು ಸ್ವಚ್ಛಗೊಳಿಸುವಾಗ ನಂದಕುಮಾರ್ ಕೆಳಗೆ ಬಿದ್ದು, ಅದರಲ್ಲಿ ಸಿಕ್ಕಿ ಹಾಕಿಕೊಂಡ.
ಇದನ್ನು ಕಂಡು ಮಲದ ಗುಂಡಿಯತ್ತ ಧಾವಿಸಿದ ಆತನ ೨೫ ವರ್ಷದ ಪುತ್ರ ನಿತೇಶ್ ಕೂಡಾ ಮಲದ ಗುಂಡಿಯಲ್ಲಿ ಸಿಲುಕಿಕೊಂಡನು.
ಇದನ್ನು ಕಂಡು ಅವರ ಕುಟುಂಬದ ಸದಸ್ಯರು ಸಹಾಯಕ್ಕಾಗಿ ಇತರರಿಗೆ ಕರೆ ಮಾಡಿದ್ದು, ಮತ್ತೆ ಮೂವರು ಅವರನ್ನು ಹೊರಗೆಳೆಯಲು ಸ್ಥಳಕ್ಕೆ ಬಂದಿದ್ದಾರೆ. ನಂತರ ಅವರೂ ಕೂಡಾ ಮಲದ ಗುಂಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸುವ ಮುನ್ನ ಐವರನ್ನೂ ಮಲದ ಗುಂಡಿಯಿಂದ ಹೊರಗೆಳೆಯಲಾಗಿತ್ತು ಎಂದು ವರದಿಯಾಗಿದೆ.
ಈ ಪೈಕಿ ನಂದಕುಮಾರ್, ನಿತೇಶ್, ದಿನೇಶ್ (೪೦) ಹಾಗೂ ಆನಂದ್ (೨೨) ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಮನುಷ್ಯರನ್ನು ಮಲ ಸ್ವಚ್ಛಗೊಳಿಸಲು ನಿಯೋಜಿಸಿಕೊಳ್ಳುವ ಹಾಗೂ ಅವರ ಪುನರ್ವಸತಿ ಕಾಯ್ದೆ, ೨೦೧೩ರ ಪ್ರಕಾರ, ಯಾವುದೇ ವ್ಯಕ್ತಿಯನ್ನು ಮಲಗುಂಡಿ ಸ್ವಚ್ಛಗೊಳಿಸಲು ವೈಯಕ್ತಿಕವಾಗಿ ನಿಯೋಜಿಸಿಕೊಳ್ಳುವಂತಿಲ್ಲ ಹಾಗೂ ಮಲದ ಗುಂಡಿಯನ್ನು ಸ್ವಚ್ಛಗೊಳಿಸುವಾಗ ಕೆಲವು ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾದುದು ಕಡ್ಡಾಯ. ಆದರೆ, ಈ ಕಾಯ್ದೆ ಜಾರಿಗೆ ಬಂದು ಹತ್ತು ವರ್ಷವೇ ಕಳೆದು ಹೋಗಿದ್ದರೂ, ಮಲದ ಗುಂಡಿ ಸ್ವಚ್ಛಗೊಳಿಸುವಾಗ ಮಾನವ ಸಾವುಗಳು ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿ ಪರಿಣಮಿಸಿದೆ.