ಮಲದಕಲ್, ರಾಮದುರ್ಗ ಗ್ರಾ.ಪಂ.ಗಳಿಗೆ ಸಿಇಓ ಭೇಟಿ ಪರಿಶೀಲನೆ

ರಾಯಚೂರು,ಜೂ.೨೧-
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಲದಕಲ್ ಮತ್ತು ರಾಮದುರ್ಗ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ ಕುರೇರ ಅವರು ಗುರುವಾರದಂದು ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಮಲದಕಲ್ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ನಂತರ ಗ್ರಾಮದಲ್ಲಿರುವ ಕಲ್ಯಾಣ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ತದನಂತರ ರಾಮದುರ್ಗ ಗ್ರಾಪಂಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮುಖ್ಯ ಗುರುಗಳೊಂದಿಗೆ ಸಭೆ ನಡೆಸಿ ಶಾಲೆಯ ಕುರಿತು ಮಾಹಿತಿ ಪಡೆದರು. ನಂತರ ಶಾಲಾ ಮಕ್ಕಳ ದಾಖಲಾತಿ ಪರಿವೀಕ್ಷಣಾ ಮಾಡಿದರು.
ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ನರೇಗಾ ಕಾಮಗಾರಿಗಳ ಕಡತ ಹಾಗೂ ೭ ವಹಿಗಳ ದಾಖಲಾತಿಗಳನ್ನು ವೀಕ್ಷಿಸಿದರು. ಇನ್ನೂ ನರೇಗಾ ಯೋಜನೆಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಾದ ದನದ ಶೇಡ್, ಎರೆಹುಳ ತೊಟ್ಟಿ ನಿರ್ಮಾಣ ಹಾಗೂ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿ, ನಿಗಧಿತ ಸಮಯದಲ್ಲಿ ಕಾಮಗಾರಿಗಳನ್ನು ಗುಣ ಮಟ್ಟದಿಂದ ಮಾಡಲು ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹೀರೆಮಠ, ಸಹಾಯಕ ನಿರ್ದೇಶಕರ (ಗ್ರಾ.ಉ) ಬಸಣ್ಣ ನಾಯಕ, ಕಾರ್ಯಪಾಲ ಅಭಿಯಂತರ ವೆಂಕಟೇಶ್ ಗಲಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕಿರಣ ಬಾಬು, ರೇಣುಕಮ್ಮ, ಜಿಲ್ಲಾ ಸಹಾಯಕ ಸಮನ್ವಯ ಅಧಿಕಾರಿ (ಎಡಿಪಿಸಿ), ತಾಂತ್ರಿಕ ಸಂಯೋಜಕರು ತಾಂತ್ರಿಕ ಸಹಾಯಕ, ಜಿಲ್ಲಾ/ತಾಲೂಕ ಐಇಸಿ ಸಂಯೋಜಕರು, ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಇದ್ದರು.