
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೯:ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿನಸರ್ಕಾರ ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆ ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಕಳೆದ ಕೆಲ ವಾರಗಳಲ್ಲಿ ರಾಜ್ಯದ ಎರಡೂ ಕಡೆಗಳಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಈ ಪ್ರಕರಣಗಳು ನಮ್ಮೆಲ್ಲರ ಮನ ಕಲುಕಿದೆ. ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಕಟ್ಟುಪಾಡುಗಳ ಹೀನ ಮನಃಸ್ಥಿತಿಯನ್ನು ಇಂತಹ ಘಟನೆಗಳು ಪ್ರತಿಫಲಿಸುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮರ್ಯಾದೆಗೇಡು ಹತ್ಯೆಗಳನ್ನು ಮಾಡುವಂತಹ ಮನಃಸ್ಥಿತಿಯನ್ನು ಸೃಷ್ಟಿಸಿರುವ ಜಾತಿಗ್ರಸ್ಥ ಸಮಾಜದಲ್ಲಿ ಪರಿವರ್ತನೆ ಜಾಗೃತಿಯನ್ನು ಮೂಡಿಸುವುದು ಅತ್ಯವಶ್ಯಕವಾಗಿದೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ ದಲಿತರಿಗೆ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಕಾಲಿರಿಸಲು ಅವಕಾಶವನ್ನು ನೀಡದಂತಹ ಆಚರಣೆ ಸಂಪ್ರದಾಯಗಳು ನಮ್ಮಲಿವೆ.
ಜಾತಿ ಸಂರಚನೆಯ ಕಟ್ಟುಪಾಡುಗಳನ್ನು ಮೀರಲು ಮಾನವೀಯತೆ, ವಿಚಾರ ಪರತೆಯೇ ದಾರಿ. ಜಾಗೃತಿಯೇ ಅಸ್ತ್ರ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. ಸಮಾಜವನ್ನು ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಮ್ಮ ಸಮಾಜಸುಧಾರಕರ ಆಶಯಗಳನ್ನು ವ್ಯಾಪಕವಾಗಿ ಪ್ರಚುರಪಡಿಸುವುದು ಇಂದಿನ ಅಗತ್ಯವಾಗಿದೆ.
ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳಿಗೆ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.