ಮರೆಗುಳಿತನ ಹೋಗಲಾಡಿಸಲು ವಿಶ್ವ ಅಲ್ಜಿಮರ್ ದಿನ


ಸೆಪ್ಟೆಂಬರ್ 21 ವಿಶ್ವ ಅಲ್ಜಿಮರ್ ದಿನ. ಇಳಿ ವಯಸ್ಸಿನ ಅಂಚಿನಲ್ಲಿ ಸುಳಿದಾಡುವ ಕೆಲವು ಸುಪ್ತ ಮನಗಳಿಗೆ ಮರೆವು ರೋಗ ಕಾಣಿಸಿಕೊಳ್ಳಬಹುದು. ಅತ್ಯುತ್ತಮ ಎಸ್‌ಯುವಿಯನ್ನು ಹೊಂದಲು ನಿಮಗೊಂದು ಅವಕಾಶ. ಇಲ್ಲಿ ಕ್ಲಿಕ್ ಮಾಡಿ ಆದರೆ ಮರೆವಿನ ರೋಗಕ್ಕೆ ಒಳಗಾಗುವ ರೋಗಿಗಳಿಗೆ ಕೇವಲ ಚಿಕಿತ್ಸೆ ಮಾತ್ರ ಸಾಲದು, ಕುಟುಂಬದ ಪ್ರೀತಿ, ಆರೈಕೆಯೂ ಅಷ್ಟೇ ಮುಖ್ಯ.

ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಣ್ಣದೊಂದು ಭರವಸೆಯ ಮಾತು ಅವರ ಮನಕ್ಕೆ ಸಂತೃಪ್ತಿ ತುಂಬಬಹುದು. 2010 ರಲ್ಲಿ ಇಡೀ ವಿಶ್ವದಲ್ಲಿ ಸುಮಾರು 3.7 ಬಿಲಿಯನ್ ಜನರು ಈ ಡೆಮೆಂಶಿಯಾ (ಮರೆವು ರೋಗ, ಮಾನಸಿಕ ಅಸ್ವಸ್ಥತೆ) ದಿಂದ ಬಳಲುತ್ತಿದ್ದು, 2020 ರಷ್ಟಕ್ಕೆ ಈ ಕಾಯಿಲೆಯಿಂದ ಬಳಲುವವರ ಸಂಖ್ಯೆ ದುಪ್ಪಟ್ಟಾಗುತ್ತದೆ ಎಂದು 2010ರ ಡೆಮೆಂಶಿಯಾ ವರದಿ ತಿಳಿದಿದೆ.

ವಯಸ್ಸು ಕಳೆದಂತೆ ಸುಮಾರು 60ರ ನಂತರ ಕಾಣಿಸಿಕೊಳ್ಳುವ ಈ ಕಾಯಿಲೆ ಮೊದಲು ಮರೆಗುಳಿತನ ತಂದು ನಂತರ ಮೆದುಳಿನ ಕೆಲಸವನ್ನು ದುರ್ಬಲಗೊಳಿಸುತ್ತಾ ಸಾಗುತ್ತದೆ. ಅತಿಯಾದ ಮರೆವು, ತಮ್ಮ ಕೆಲಸಗಳನ್ನೂ ಮಾಡಿಕೊಳ್ಳಲು ಅಸಹಾಯಕರಾಗುವುದು, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವುದು ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಸಮಯದಲ್ಲಿ ಚಿಕಿತ್ಸೆಯೊಂದಿಗೆ ಮನೆಯವರ ಪ್ರೀತಿ, ವಾತ್ಸಲ್ಯ ರೋಗಿಗಳಿಗೆ ಹೆಚ್ಚಿನ ಅವಶ್ಯಕತೆಯಾಗಿರುತ್ತದೆ, ಅವರಗೆ ಒಂಟಿ ಎನ್ನುವ ಭಾವನೆ ಕಾಡದಂತೆ, ಅವರು ಅವಲಂಬಿತರೆನ್ನುವಂತೆ ನೋಡದೆ ಮಕ್ಕಳಂತೆ ಪ್ರೀತಿ ತೋರಿಸಿದರೆ ಅವರ ಖಿನ್ನತೆ, ಒತ್ತಡವನ್ನು ಕಡಿಮೆ ಮಾಡಬಹುದು. ವಯಸ್ಸಾಗುತ್ತಿದ್ದಂತೆ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಮತ್ತು ಇನ್ನಿತರ ಆರೋಗ್ಯ ಸಂಬಂಧಿ ತೊಂದರೆಗಳ ಬಗ್ಗೆ ಮೊದಲೇ ಜಾಗೃತಿ ವಹಿಸಿದರೆ ಒಳ್ಳೆಯದು.

ಇಳಿವಯಸ್ಸು, ಅನುವಂಶೀಯತೆ, ಜೆನೆಟಿಕ್ ಅಂಶಗಳು ಮುಖ್ಯವಾದವು. ಜೊತೆಗೆ ತಲೆಗೆ ಬಲವಾದ ಪೆಟ್ಟು, ದುಃಶ್ಚಟ, ಅನಾರೋಗ್ಯಕರ ಆರೋಗ್ಯಶೈಲಿ – ಈ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಲ್ಜಿಮರ್  ಕಾಯಿಲೆಯಲ್ಲಿ ಅಮೈಲಾಯ್ಡ್ ಹಾಗೂ ಟಾವು ಎಂಬ ರಾಸಾಯನಿಕಗಳು ಮೆದುಳಿನ ನರಕೋಶಗಳಲ್ಲಿ ಹಾಗೂ ಸುತ್ತಮುತ್ತ ಸಂಗ್ರಹಗೊಳ್ಳುತ್ತವೆ. ಇದರಿಂದ ನರಕೋಶಗಳು ಹಾಳಾಗುತ್ತವೆ. ಮೆದುಳಿನ ಗಾತ್ರ ಸಂಕುಚಿತಗೊಳ್ಳುತ್ತದೆ. ಅಸಿಟೈಲ್ ಕೊಲೀನ್ ಎಂಬ ನರವಾಹಕದ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ನೆನಪಿನ ಶಕ್ತಿ ಕುಂದಲಾರಂಭಿಸುತ್ತದೆ.

ಮೊದಲ ಹಂತದಲ್ಲಿ ಮರೆವು ಶುರುವಾಗುತ್ತದೆ. ಇತ್ತೀಚಿನ ಚಟುವಟಿಕೆಗಳು, ಘಟನೆಗಳು ನೆನಪಿಗೆ ಬರುವುದಿಲ್ಲ. ಉದಾಹರಣೆಗೆ: ಬೆಳಗಿನ ಉಪಾಹಾರ ಸೇವಿಸಿದ್ದರೂ, ಪದೇ ಪದೇ ಬಂದು ಉಪಾಹಾರ ಕೇಳುವುದು. ದಿನನಿತ್ಯದ ವಸ್ತುಗಳನ್ನು ಇಟ್ಟ ಜಾಗವನ್ನು ಮರೆಯುವುದು, ಹುಡುಕಾಡುವುದು. ವಸ್ತುಗಳ ಹೆಸರೂ ಮರೆತು ಹೋಗಬಹುದು. ಹೊರಗೆ ಹೋದರೆ ಮರಳಿ ಮನೆಗೆ ಬರಲು ದಾರಿ ಗೊತ್ತಾಗದೇ ಇರಬಹುದು. ಸಂಕೀರ್ಣ ಚಟುವಟಿಕೆಗಳನ್ನು ನಿಭಾಯಿಸಲು ಆಗುವುದಿಲ್ಲ.

ಈ ಹಂತದಲ್ಲಿ, ಚಿಕ್ಕ ಪುಟ್ಟ ವಿಷಯಗಳು ನೆನಪಿಗೆ ಬರದಿದ್ದಾಗ, ವಸ್ತುಗಳು ಸಿಗದಿದ್ದಾಗ ಹತಾಶೆ, ಸಿಟ್ಟು ಬರುತ್ತದೆ. ಹೀಗೆ ಮುಂದುವರಿದರೆ, ಆತಂಕ, ಖಿನ್ನತೆಗಳು ಶುರುವಾಗುತ್ತವೆ.ಮಧ್ಯದ ಹಂತದಲ್ಲಿ ಮರೆವು ಇನ್ನಷ್ಟು ಹೆಚ್ಚಿ ಜೀವನದ ವಿವಿಧ ಆಯಾಮಗಳನ್ನು ಆವರಿಸಿಕೊಳ್ಳುತ್ತದೆ. ಲೆಕ್ಕ, ವಸ್ತುಗಳ ಉಪಯೋಗ, ಮನೆಯಲ್ಲಿ ಕೋಣೆಯ ದಾರಿ ಇವೆಲ್ಲ ಮರೆತು ಹೋಗಬಹುದು. ಹತ್ತಿರದ ಸಂಬಂಧಿಗಳು, ಬಂಧುಮಿತ್ರರ ಹೆಸರುಗಳನ್ನು ಸ್ಮರಿಸಿಕೊಳ್ಳಲು ಆಗದಿರಬಹುದು. ದಿಕ್ಕು ತಪ್ಪಿ ಅಲೆದಾಡುವುದು, ಪದೇ ಪದೇ ಕೇಳಿದ್ದನ್ನೇ ಕೇಳುವುದು ಸಾಮಾನ್ಯವಾಗುತ್ತದೆ. ಮಾತು ಕಡಿಮೆಯಾಗಬಹುದು. ಭ್ರಾಂತಿ, ನಿದ್ರಾಹೀನತೆ, ಅಸಹಜವಾದ ಸಿಟ್ಟು, ಗೊಂದಲ ಉಂಟಾಗುತ್ತವೆ.

ಕೊಲಂಬಿಯಾದ ಯರುಮಲ್ ಎಂಬ ಪ್ರದೇಶ ಜಗತ್ತಿನಲ್ಲಿಯೇ ಅತಿ ಹೆಚ್ಚು ಅಲ್ಜಿಮರ್ ರೋಗಿಗಳನ್ನು ಹೊಂದಿರುವ ಪ್ರದೇಶವೆಂದು ಕುಖ್ಯಾತಿ ಗಳಿಸಿದೆ. ಇದಕ್ಕೆ ಮನುಷ್ಯನ ಡಿಎನ್‌ಎಯಲ್ಲಿನ ಒಂದು ಜೀನ್‌ನ ರೂಪಾಂತರ ಕಾರಣ. ಜನಸಂಖ್ಯೆಯ ಶೇ 15ರಷ್ಟು , ಸುಮಾರು 5000 ಜನ ಅಲ್ಜಿಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಇತ್ತೀಚಿಗೆ, ಅನೇಕ ಮುಂದುವರಿದ ರಾಷ್ಟ್ರಗಳಲ್ಲಿ ಡೆಮೆನ್ಶಿಯ ಗ್ರಾಮಗಳನ್ನು ಸ್ಥಾಪಿಸುತ್ತಿದ್ದಾರೆ. ಈ ವಸತಿ ಪ್ರದೇಶಗಳಲ್ಲಿ, ಮನೆಗಳು, ಅಂಗಡಿಗಳು, ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಡೆಮೆನ್ಶಿಯ ಇರುವ ವ್ಯಕ್ತಿಗಳು ಜೀವನ ನಡೆಸಲು ಪೂರಕವಾಗಿರುವಂತೆ ಕಟ್ಟಿರುತ್ತಾರೆ. ನೆದರ್ಲೆಂಡ್‌ನ ವೀಸ್ಪ್ ಹಾಗೂ ಫ್ರಾನ್ಸ್‌ನ ಡ್ಯಾಕ್ಸ್ ಎಂಬಲ್ಲಿ ಇಂತಹ ಹಳ್ಳಿಗಳಿವೆ.

ಕನ್ನಡದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ಮರಾಠಿಯ ‘ಅಸ್ತು’, ಮಲಯಾಳಂನ ‘ತನ್ಮಾತ್ರ’ದಂತಹ ಚಲನಚಿತ್ರಗಳು ಈ ಕಾಯಿಲೆಯ ಬಗ್ಗೆ, ಬಳಲುವ ವ್ಯಕ್ತಿಯ ಸ್ಥಿತಿ ಹಾಗೂ ಆರೈಕೆ ಮಾಡುವವರ ಅನುಭವವನ್ನು ವಿವರಿಸುವ ಪರಿಯನ್ನು ನೋಡಿದ್ದೇವೆ.