ಮರು ಟೆಂಡರ್‍ಗೆ ಆಹ್ವಾನ: ಲೋಪ ಒಪ್ಪಿಕೊಂಡ ಇಲಾಖೆ

ಬೀದರ್: ಮಾ.28:ಸಣ್ಣ ನೀರಾವರಿ ಇಲಾಖೆಯು ಔರಾದ್ ತಾಲ್ಲೂಕಿನ ಹಂಗರಗಾ ಹಾಗೂ ಸಾವರಗಾಂವ್ ಮಧ್ಯೆ ನಿರ್ಮಿಸಲಿರುವ ಬ್ರಿಡ್ಜ್ ಕಂ ಬ್ಯಾರೇಜ್‍ಗೆ ಮರು ಟೆಂಡರ್ ಆಹ್ವಾನಿಸುವ ಮೂಲಕ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ಮುಖಂಡ ದೀಪಕ ಪಾಟೀಲ ಚಾಂದೋರಿ ಹೇಳಿದ್ದಾರೆ.
ಟೆಂಡರ್‍ನಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು. ಈ ಕಾರಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕೆಕೆಆರ್‍ಡಿಬಿ ಕಾರ್ಯದರ್ಶಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದೆ. ಇಲಾಖೆ ಇದೀಗ ಹಿಂದೆ ಕರೆದಿದ್ದ ಟೆಂಡರ್ ರದ್ದುಪಡಿಸಿದೆ ಎಂದು ತಿಳಿಸಿದ್ದಾರೆ.
ಅವಶ್ಯಕತೆ ಇಲ್ಲದ ಕಡೆ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಇದರಲ್ಲಿ ಸ್ಥಳೀಯ ಶಾಸಕರು ಹಾಗೂ ಗುತ್ತಿಗೆದಾರರ ಹಿತ ಅಡಗಿದೆ. ಕೆಕೆಆರ್‍ಡಿಬಿಯ ರೂ. 69 ಕೋಟಿ ಪೋಲು ಮಾಡಲಾಗುತ್ತಿದೆ. ಟೆಂಡರ್‍ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನಿಯಮ ಗಾಳಿಗೆ ತೂರಲಾಗಿದೆ ಎಂದು ನಾನು ಆರೋಪಿಸಿದಾಗ, ಕೆಲವರು ಅಭಿವೃದ್ಧಿ ಕಾಮಗಾರಿಗೆ ಅಡ್ಡಗಾಲು ಹಾಕುತ್ತಿದ್ದೇನೆ ಎಂದು ಹೇಳಿದ್ದರು. ಆದರೆ, ನಾನು ಹೇಳಿದ್ದು ಸತ್ಯವಾಗಿದ್ದರಿಂದ ಹಾಗೂ ಅದು ಮನವರಿಕೆ ಆಗಿದ್ದರಿಂದ ಇಲಾಖೆ ಮೊದಲಿನ ಟೆಂಡರ್‍ನಿಂದ ಹಿಂದೆ ಸರಿದು, ಮರು ಟೆಂಡರ್ ಆಹ್ವಾನಿಸಿದೆ. ಟೆಂಡರ್ ಪಾರದರ್ಶಕವಾಗಿದ್ದರೆ, ಅದರಲ್ಲಿ ಯಾವುದೇ ಗೋಲ್‍ಮಾಲ್ ನಡೆಯದಿದ್ದರೆ ಮರು ಟೆಂಡರ್ ಕರೆಯುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮೊದಲಿನ ಟೆಂಡರ್‍ನಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಳ ಸಂಚು ನಡೆಸಿ, ನಿಯಮ ಉಲ್ಲಂಘಿಸಿ, ತಾಂತ್ರಿಕ ಹಾಗೂ ಆರ್ಥಿಕ ಬಿಡ್‍ಗೆ ಮಂಜೂರಾತಿ ನೀಡಿದ್ದರು. ಮರು ಟೆಂಡರ್ ಆಹ್ವಾನವು ಔರಾದ್ ತಾಲ್ಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈಗಲಾದರೂ ಶಾಸಕರು ತಮ್ಮ ತಪ್ಪು ಒಪ್ಪಿಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹೊಸ ಟೆಂಡರ್ ಆಹ್ವಾನದಲ್ಲೂ ಭ್ರಷ್ಟಾಚಾರಕ್ಕೆ ಪೂರಕ ಅಂಶಗಳಿರುವುದು ಕಂಡು ಬರುತ್ತಿದೆ. ಸಾಮಗ್ರಿಗಳ ಪ್ರಮಾಣ ಕಡಿಮೆ ಮಾಡಲಾಗಿದೆ. ಸಾಮಾನ್ಯವಾಗಿ ಟೆಂಡರ್ ಸಲ್ಲಿಕೆಗೆ ಒಂದು ತಿಂಗಳ ಅವಧಿ ನೀಡಲಾಗುತ್ತದೆ. ಆದರೆ, ತುರ್ತು ಸಂದರ್ಭ ಇಲ್ಲದಿದ್ದರೂ, ಟೆಂಡರ್ ಸಲ್ಲಿಕೆಗೆ ಏಳು ದಿನ ಮಾತ್ರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮರು ಟೆಂಡರ್‍ನಲ್ಲೂ ನಿಯಮ ಉಲ್ಲಂಘಿಸಿ, ಭ್ರಷ್ಟಾಚಾರ ನಡೆಸಿದರೆ ಕಾನೂನು ಹೋರಾಟ ಮುಂದುವರಿಸುವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ಟೆಂಡರ್‍ನಲ್ಲಿ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ಇಲ್ಲವೇ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.