ಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಏ.27: ರಾಷ್ಟ್ರದಲ್ಲಿ ವಿಶಿಷ್ಟ ಮತ್ತು ವೈವಿಧ್ಯಮಯ ಶಿಲ್ಪಕಲೆಗಳ ತಾಣವಾಗಿರುವ ಕೊಟ್ಟೂರು ತಾಲೂಕಿನ ಶ್ರೀ ಉಜ್ಜಿನಿ ಸದ್ಧರ್ಮ ಸಿಂಹಾಸನ ಪೀಠದ ಕ್ಷೇತ್ರನಾಥ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ‘ಶಿಖರಕ್ಕೆ ತೈಲಾಭಿಷೇಕ” ಬುಧವಾರ ಸಂಜೆ ಅಸಂಖ್ಯಾತ ಭಕ್ತಸ್ತೋಮದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಇದಕ್ಕೂ ಮುನ್ನ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯಂತೆ ಜರ್ಮಲಿ ಪಾಳೆಯಗಾರರ ವಂಶಸ್ಥರು ನಾಗರಾಜನಾಯಕ, ಬಸವರಾಜ ನಾಯಕ, ಮತ್ತಿತರರು ತೈಲತುಂಬಿದ ಕುಂಬಕ್ಕೆ ಪೂಜೆಮಾಡಿಕೊಂಡು ಜರ್ಮಲಿಯಿಂದ ಪಾದಯಾತ್ರೆ ಮೂಲಕ ಮಧ್ಯಾಹ್ನ 2 ಗಂಟೆಗೆ ಉಜ್ಜಿನಿಗೆ ತಂದು ಶ್ರೀಸ್ವಾಮಿಯ ಪುರೋಹಿತರಿಗೆ ಅರ್ಪಿಸಿದರು.
ಪುರೋಹಿತರು ಬಂಗಾರಿ ಶಿವಣ್ಣ, ಬಂಗಾರಿ ವೀರೇಶ್, ಮತ್ತಿಹಳ್ಳಿ ರೇವಣಸಿದ್ಧಪ್ಪ, ಬೆಳ್ಳಕಟ್ಟಿ ನಾಗರಾಜ್ ಆ ತೈಲ ತುಂಬಿದ ಕುಂಬವನ್ನು ಅದ್ದೂರಿ ಮೆರವಣಿಗೆಯೊಂದಿಗೆ ತಂದು ಸದ್ಧರ್ಮ ಪೀಠದ ಜಗದ್ಗುರುಗಳಿಗೆ ಅರ್ಪಿಸಿದರು, ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತೈಲತುಂಬಿದ ಕುಂಬಗಳಿಗೆ ಅಶಿರ್ವಾದಿಸಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರ ಅಭಿಷೇಕಕ್ಕೆ ಗ್ರೀನ್ ಸಿಗ್ನಲ್ ಸೂಚಿಸಿದರು
ಪ್ರತಿ ವರ್ಷದ ಧಾರ್ಮಿಕ ಆಚರಣೆಯಂತೆ ಜರ್ಮಲಿ ಪಾಳೇಗಾರರ ವಂಶಸ್ಥರಿಂದ ಬಂದ ತೈಲದಿಂದ ಬುಧವಾರ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ‘ಶಿಖರಕ್ಕೆ ಅಭಿಷೇಕ” ನೆರವೇರುತ್ತಿದ್ದಂತೆ ನೆರದ ಭಕ್ತಗಣವು ಶ್ರೀಸ್ವಾಮಿಗೆ ಹಾಕಿದ ಹರ್ಷೋದ್ಗಾರದ ಜಯಕಾರ ಘೋಷಣೆ ಮುಗಿಲು ಮಟ್ಟಿತು.
ಜರ್ಮಲಿ ವಂಶಸ್ಥರಿಂದ ಬಂದ ತೈಲವನ್ನು ಶಿಖರಕ್ಕೆ ಎರೆಯುತ್ತಿದ್ದಂತೆ ಹರಕೆ ಹೊತ್ತ ಮತ್ತು ಉಳಿದ ಭಕ್ತರು ಎಣ್ಣೆಯನ್ನು ಎರೆದು ಭಕ್ತಿ ಸಮರ್ಪಿಸಿದರು ಹಾಗೆ ಶಿಖರಕ್ಕೆ ಸಂಪೂರ್ಣ ತೈಲಾಭಿಷೇಕ ದೃಶ್ಯವನ್ನು ದೂರದಲ್ಲಿ ನಿಂತ ಭಕ್ತರು ವೀಕ್ಷಿಸಿ
ಕಣ್ತುಂಬಿಕೊಂಡರು,ಇದರೊಟ್ಟಿಗೆ ಶಿಖರಕ್ಕೆ ಬಾಳೆ ಹಣ್ಣು, ಉತ್ತುತ್ತಿ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು.
ಶಿಖರಕ್ಕೆ ಎಣ್ಣೆಯನ್ನು ಮಜ್ಜನಗೊಳಿಸುವ ಪ್ರಕ್ರಿಯೆ ಸುಮಾರು ಒಂದು ತಾಸುಗಳ ಕಾಲ ನಿರಂತರವಾಗಿ ನೆರವೇರಿತು, ಶಿಖರಕ್ಕೆ ತೈಲ ಮಜ್ಜನ ಮಾಡುವ ಆಯಗಾರರು ಸಂಪೂರ್ಣ ಎಣ್ಣೆಯಿಂದ ಒದ್ದೆಯಾಗಿದ್ದರು, ಜಾಣ್ಮೆ ಮತ್ತು ಜಾಗೃತಿಯಿಂದ ಶಿಖರದ ಮೇಲೇರಿ ಶಿಖರಕ್ಕೆ ತೈಲಾಭಿಷೇಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಈ ವೇಳೆ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಕೂಡ್ಲಿಗಿ ಪ್ರಶಾಂತ ಸಾಗರ ಸ್ವಾಮೀಜಿ, ಹರಪನಹಳ್ಳಿ ತಗ್ಗಿನಮಠದ ಸ್ವಾಮೀಜಿ ಹಾಗೂ ಹಿರೇಹಡಗಲಿ ಹಾಲಸ್ವಾಮಿ ಸೇರಿದಂತೆ ಮತ್ತಿತರ ಮಠಾದೀಶರರು ಹಾಗೂ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತವೃಂದ ಶ್ರೀಸ್ವಾಮಿಯ ಶಿಖರ ತೈಲಾಭಿಷೇಕಕ್ಕೆ ಸಾಕ್ಷಿಯಾಗಿದ್ದರು. ಬಂಗಾರಿ ಶಿವಣ್ಣ, ಬಂಗಾರಿ ವೀರೇಶ್, ಮತ್ತಿಹಳ್ಳಿ ರೇವಣಸಿದ್ಧಪ್ಪ, ಬೆಳ್ಳಕಟ್ಟಿ ನಾಗರಾಜ್ ಧಾರ್ಮಿಕ ಪರಂಪರೆಯಂತೆ ಜರ್ಮಲಿ ಪಾಳೇಗಾರರ ವಂಶಸ್ಥರು ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರಕ್ಕೆ ತೈಲಾಭಿಷೇಕಕ್ಕೆಂದು ತಂದ ತೈಲ ತುಂಬಿದ ಕುಂಬವನ್ನು ಸ್ವೀಕರಿಸಿ ಅದ್ದೂರಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕೊಂಡೊಯ್ದರು.