
ನ್ಯೂಯಾರ್ಕ್,ಏ.೧೧- ಈಗಾಗಲೇ ಹಲವಾರು ರೀತಿಯ ಪ್ರಮಾದಗಳ ಮೂಲಕ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಇದೀಗ ೨೦೨೪ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಮರುಚುನಾವಣೆಗೆ ಸ್ಪರ್ಧಿಸುವ ಕುರಿತು ಸುಳಿವು ಬಿಟ್ಟುಕೊಟ್ಟಿದ್ದಾರೆ.
ಶ್ವೇತಭವನದಲ್ಲಿ ಈಸ್ಟರ್ ಹಬ್ಬದಂದು ನಡೆಯುವ ಮಕ್ಕಳ ಕಾರ್ಯಕ್ರಮಕ್ಕೆ ಮೊದಲು ಅಮೆರಿಕಾದ ಸುದ್ದಿ ಮಾಧ್ಯಮ ಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಬೈಡೆನ್ ಈ ಕುರಿತು ಮಾಹಿತಿ ನೀಡಿದ್ದಾರೆ. ೨೦೧೯ರಲ್ಲೂ ಚುನಾವಣೆ ಸ್ಪರ್ಧಿಸುವ ಸಮಯದಲ್ಲಿ ಅಮೆರಿಕನ್ ನಾಗರಿಕರಿಂದ ಬೈಡೆನ್ ಟೀಕೆಗೆ ಗುರಿಯಾಗಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸರಿಯಾಗಿ ಮಾತನಾಡಲು ಕೂಡ ಸಮಸ್ಯೆ ಎದುರಿಸುತ್ತಿರುವ ಬೈಡೆನ್ ಅಧ್ಯಕ್ಷೀಯ ಹುದ್ದೆಗೆ ಸರಿಯಾದ ವ್ಯಕ್ತಿಯಲ್ಲ ಎಂಬ ಅಭಿಪ್ರಾಯ ಆ ಸಮಯದಲ್ಲಿ ಹೆಚ್ಚಿನ ಅಮೆರಿಕನ್ ನಾಗಕರಿಂದ ವ್ಯಕ್ತವಾಗಿತ್ತು. ಆದರೆ ಕೋವಿಡ್ ಸಮಯದಲ್ಲಿ ಅಸಮರ್ಪಕ ನಿರ್ವಹಣೆ ತೋರಿದ ಆರೋಪದಲ್ಲಿ ಟ್ರಂಪ್ ಆ ಸಮಯದಲ್ಲಿ ಚುನಾವಣೆ ಸೋಲುಂಡು, ಅಚ್ಚರಿಯ ರೀತಿಯಲ್ಲಿ ಬೈಡೆನ್ ಗೆಲುವು ಸಾಧಿಸಿದ್ದರು. ಅದೂ ಅಲ್ಲದೆ ಸದ್ಯದ ಜಾಗತಿಕ ರಾಜಕೀಯದಲ್ಲೂ ಬೈಡೆನ್ ತೆಗೆದುಕೊಂಡ ಅನೇಕ ತಪ್ಪು ನಿರ್ಧಾರಗಳಿಂದ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ ಬೈಡೆನ್ ತಾನು, ೨೦೨೪ರ ಅಧ್ಯಕ್ಷೀಯ ಚುನಾವಣೆಗೆ ಮತ್ತೆ ಸ್ಪರ್ಧಿಸುವ ಕುರಿತು ಸುಳಿವು ನೀಡಿರುವುದು ಸಹಜವಾಗಿಯೇ ಹಲವರ ಅಚ್ಚರಿಗೆ ಕಾರಣವಾಗಿದೆ. ಇನ್ನು ಕಳೆದ ನವೆಂಬರ್‌ನಲ್ಲೂ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದರು. ಮೂಲಗಳ ಪ್ರಕಾರ ಮುಂದಿನ ಜುಲೈನಲ್ಲಿ ನಡೆಯಲಿರುವ ತ್ರೈಮಾಸಿಕ ಚುನಾವಣಾ ದೇಣಿಗೆ ಸಂಗ್ರಹಣೆ ವರೆಗೂ ಬೈಡೆನ್ ಕಾದು ನೋಡುವ ತಂತ್ರಕ್ಕೆ ಮೊರೆಹೋಗಬಹುದು ಎನ್ನಲಾಗಿದೆ. ಸಾಮಾನ್ಯವಾಗಿ ತ್ರೈಮಾಸಿಕ ನಿಧಿಸಂಗ್ರಹಣೆಯ ಮೊತ್ತವನ್ನು ಆಗಾಗ್ಗೆ ಪ್ರಚಾರದ ಶಕ್ತಿಯ ಪ್ರಮುಖ ಸೂಚನೆಯಾಗಿ ವೀಕ್ಷಿಸಲಾಗುತ್ತದೆ. ಹೆಚ್ಚಿನ ನಿಧಿಸಂಗ್ರಹಣೆಯಾದರೆ ಜನಬೆಂಬಲದ ಬಗ್ಗೆ ಕೂಡ ಬಹುತೇಕ ಖಚಿತ ಮಾಹಿತಿ ಲಭ್ಯವಾಗುತ್ತದೆ. ಇನ್ನು ೨೦೨೪ರ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಸದ್ಯ ಲೇಖಕಿ ಮೇರಿಯಾನ್ನೆ ವಿಲಿಯಮ್ಸನ್ ಹಾಗೂ ಲಸಿಕೆ ವಿರೋಧಿ ಕಾರ್ಯಕರ್ತ ರಾಬರ್ಟ್ ಕೆನಡಿ ಜೂನಿಯರ್ ಹೆಸರನ್ನು ಘೋಷಿಸಲಾಗಿದೆ. ಈ ನಡುವೆ ಬೈಡೆನ್ ಕೂಡ ಚುನಾವಣೆ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದರೆ ಪಕ್ಷದೊಳಗೆ ಕಠಿಣ ಸ್ಪರ್ಧೆ ಏರ್ಪಡುವುದು ಖಚಿತ ಎನ್ನಲಾಗಿದೆ.
೮೦ರ ಹರೆಯದ ಬೈಡೆನ್!
ಸದ್ಯ ೮೦ರ ಹರೆಯದ ಬೈಡೆನ್ ಅಮೆರಿಕಾ ಇತಿಹಾಸದಲ್ಲಿ ಅತೀ ಹಿರಿಯ ಅಧ್ಯಕ್ಷ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇನ್ನು ಒಂದು ವೇಳೆ ೨೦೨೪ರ ಮರು ಚುನಾವಣೆಯಲ್ಲಿ ಗೆದ್ದು, ಅಧಿಕಾರ ಪೂರ್ಣಗೊಳಿಸುವ ವೇಳೆಗೆ ಬೈಡೆನ್ ಅವರಿಗೆ ೮೫ರ ಹರೆಯ ದಾಟುತ್ತದೆ. ಹಾಗಾಗಿ ೨೦೨೪ರ ಚುನಾವಣೆಗೆ ಬೈಡೆನ್ ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗಿದೆ.