
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ1: ಮರಿಯಮ್ಮನಹಳ್ಳಿಯಿಂದ ಶಿವಮೊಗ್ಗ ಮಾರ್ಗದವರೆಗೂ ನೂತನ ಹೆದ್ದಾರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ಸಂಬಂಧಿಸಿದಂತೆ ಸಿದ್ಧತೆ ಕೈಗೊಳ್ಳಬೇಕು, ಈ ಕುರಿತು ಕೇಂದ್ರ ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಮಂಜೂರಾತಿಗೆ ಕ್ರಮವಹಿಸುವುದಾಗಿ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರು ತಿಳಿಸಿದರು.
ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ವಾಹನ ಸವಾರರಿಗೆ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗುವ ನಿಟ್ಟಿನಲ್ಲಿ ಹೆದ್ದಾರಿ ಅತ್ಯಾವಶ್ಯಕವಾಗಿದ್ದು, ಶೀಘ್ರವಾಗಿ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಪ್ರಕ್ರಿಯೆಗೆ ಸಿದ್ಧತೆ ಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳು ತ್ರೈಮಾಸಿಕ ವರದಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೂಡ್ಲಿಗಿ, ಹರಪನಹಳ್ಳಿ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚೆಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆ ಜಿಲ್ಲೆ ಸಂಸದ ಜಿ.ಎಂ.ಸಿದ್ಧೇಶ್ವರ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ತಮ್ಮ ವ್ಯಾಪ್ತಿಯ ಕ್ಷೇತ್ರಗಳ ಕಾಮಗಾರಿ ಹಾಗೂ ಇತರ ಮೂಲಸೌಕರ್ಯ ಒದಗಿಸುವ ಕುರಿತು ಅಧಿಕಾರಿಗಳು ಹೆಚ್ಚಿನ ಮಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ಗಮನಹರಿಸಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸಂಸದರು ಮತ್ತು ಶಾಸಕರ ಗಮನಕ್ಕೆ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
@12bc = ವೈಜ್ಞಾನಿಕ ರಸ್ತೆ, ಯುಜಿಡಿಗೆ ಒತ್ತು:
ಕೂಡ್ಲಿಗಿ ತಾಲ್ಲೂಕು ವ್ಯಾಪ್ತಿಯಲ್ಲಿ ವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಸಮರ್ಪಕವಾಗಿ ಯುಜಿಡಿ ಕಾಮಗಾರಿಗಳು ಪೂರ್ಣವಾಗಿಲ್ಲ. ಜನರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಕೈಗೊಳ್ಳಲು ಶಾಸಕರು ತಿಳಿಸಿದರು. ಜಿಲ್ಲಾಧಿಕಾರಿಗಳು 15ನೇ ಹಣಕಾಸು ಮತ್ತು ಎಸ್‍ಸಿಪಿ, ಟಿಎಸ್‍ಪಿ ಅನುದಾನ ಬಳಸಿ ಯುಜಿಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿಳಂಬ, ಕ್ರಮಕ್ಕೆ ಸೂಚನೆ: ಕೂಡ್ಲಿಗಿ ಭಾಗದಲ್ಲಿ ಬಹುಕಾಲದ ಬೇಡಿಕೆ ಆಗಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಕಾಮಗಾರಿ ವಿಳಂಬ ಆಗುತ್ತಿರುವ ಕುರಿತು ಶಾಸಕರು ತಿಳಿಸಿದಾಗ, ಈ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ಕಾರಣ ಪಡೆಯಬೇಕು. ಕಾಮಗಾರಿ ವಿಳಂಬ ಕಂಡುಬಂದರೆ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳಿಗೆ ನೋಟಿಸ್ ಜಾರಿಗೆ ಸೂಚನೆ:
ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗೆ ಹಾಗೂ ಗೈರಾಗಿದ್ದ ಹರಪನಹಳ್ಳಿ ಎಂಜಿನಿಯರ್‍ಗೆ ಶೋಕಾಸ್ ನೋಟಿಸ್ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ಧೇಶ್ವರ, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ದಿಶಾ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಕುಸುಮಾ ಘಂಟಿ ಸೇರಿದಂತೆ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಪ್ರಾದೇಶಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಪಾಲ್ಗೊಂಡಿದ್ದರು.