
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮೇ.16: ಕ್ಷೇತ್ರದ ಸ್ವಾಭಿಮಾನಿ ಮತದಾರರು ಆಶೀರ್ವದಿಸಿದ್ದು, ಅವರ ನಂಬಿಕೆಗೆ ಚ್ಯುತಿ ಬರದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹಗರಿಬೊಮ್ಮನಹಳ್ಳಿಯ ನೂತನ ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಅವರು ಪಟ್ಟಣದ ಅರಳಿಹಳ್ಳಿ ಗುರುಪಾದದೇವರ ಮಠಕ್ಕೆ ಆಗಮಿಸಿ ಮಠದ ಶ್ರೀಗಳಾದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳ ಆಶೀರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಬಾರಿ ಕ್ಷೇತ್ರದಾದ್ಯಂತ ಯುವಕರು, ಮಹಿಳೆಯರು ಹಾಗೂ ಹಿತೈಷಿಗಳು ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ಭಾವಿಸಿ, ಯಾವುದೇ ಫಲಾಪೇಕ್ಷೆ ಇಲ್ಲದೇ ನನ್ನೊಂದಿಗೆ ಹಗಲಿರುಳು ಶ್ರಮಿಸಿ ಜಯಶಾಲಿಯನ್ನಾಗಿಸಿದ್ದಾರೆ. ಅವರ ಆಶಯದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಪ್ರಕ್ರಿಯೆಯು ಟೆಂಡರ್ ಹಂತದಲ್ಲಿದೆ. ಈ ಕುರಿತು 2-3 ದಿನಗಳಲ್ಲಿ ಸಭೆ ನಡೆಸಿ, ಅಧಿಕಾರಿಗಳ ಜೊತೆ ಚರ್ಚಿಸಿ ಕಾಮಗಾರಿ ಚಾಲನೆಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ತಿಂಗಳೊಳಗೆ ಚಾಲನೆ ನೀಡಲಾಗುವುದು ಎಂದರು.
ಕ್ಷೇತ್ರದ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸರ್ಕಾರದ ಯೋಜನೆಯನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಸ್ಥಳೀಯ ಮುಖಂಡರಾದ ಬಿ.ಎಂ.ಎಸ್.ಮಲ್ಲಿಕಾರ್ಜುನಯ್ಯ, ಗುಂಡಾಸ್ವಾಮಿ,
ಎಂ.ಅಶೋಕ, ನಂದೀಶ, ಶ್ರೀಕಾಂತ್ ನಾಯ್ಕ, ಉರುವಕೊಂಡ ವೆಂಕಟೇಶ, ಡಾ.ಎರ್ರಿಸ್ವಾಮಿ, ಎಲಿಗಾರ ಮಂಜುನಾಥ, ಬುಲ್ಡಿ ರಾಮಣ್ಣ, ಎ.ಸುಭಾನ್, ಎ.ರಹೀಮಾನ್, ರಾಜಭಕ್ಷಿ, ಕುಪ್ಪಿನ ಕೆರೆ ವೆಂಕಟೇಶ, ಕಲ್ಲಾಳ ಪರಶುರಾಮ, ಕೆ.ಜಯ ಪ್ರಕಾಶ್, ಬಾಪುರಿ ಅಂಜಿನಿ, ರಾಘವೇಂದ್ರ ಹಾಗೂ ಇತರರು ಇದ್ದರು.