ಮರಿಯಮ್ಮನಹಳ್ಳಿ ಜೋಡಿ ರಥೋತ್ಸವದ ನಿಮಿತ್ತ ಶಾಂತಿ ಸಭೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ ಮಾ.29 :  ಪ್ರತಿ ವರ್ಷದಂತೆ ಈ ವರ್ಷವೂ ರಾಮನವಮಿಯಂದು ಜರುಗಲಿರುವ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಜೋಡಿ ರಥೋತ್ಸವದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ  ಡಿ.ವೈ.ಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಸಲಾಯಿತು.
ಶಾಂತಿ ಸಭೆಯನ್ನುದ್ಧೇಶಿಸಿ  ಡಿವೈಎಸ್‌ಪಿ ಮಲ್ಲೇಶಪ್ಪ ಮಾತನಾಡಿ, ಜಾತ್ರಾ ಸಂದರ್ಭದಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಮಹಿಳೆಯರು ತಾವು ಧರಿಸಿದ ಚಿನ್ನದ ಒಡವೆಗಳ ಮೇಲೆ ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು. ಅಲ್ಲದೇ ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರು ಬೆಲೆ ಬಾಳುವ ಆಭರಣಗಳನ್ನು ಧರಿಸದೆ ತಮ್ಮ ಮನೆಯಲ್ಲಿ  ಇರಿಸಲು ಮನವಿ ಮಾಡಿದರು.
ಜಾತ್ರಾ ಸಂದರ್ಭದ ಜನಜಂಗುಳಿಯಲ್ಲಿ ಪಿಕ್ ಪಾಕೆಟ್, ಸರಗಳ್ಳತನ ಇತರೆ ಅಪರಾಧ ಕೃತ್ಯಗಳು ಜರುಗದಂತೆ ನಿಗಾವಹಿಸಲಾಗುವುದು. ಒಂದು ವೇಳೆ ಅಂತಹ ಕೃತ್ಯಗಳು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ರಥೋತ್ಸವ ಸಂದರ್ಭದ ಸಂಚಾರ ದಟ್ಟಣೆ ನಿಯಂತ್ರಿಸಿ ಸುಗಮ ಸಂಚಾರದ ದೃಷ್ಟಿಯಿಂದ ಮಧ್ಯಾಹ್ನ 1 ಘಂಟೆಯಿಂದ ವಾಹನಗಳ ಸಂಚಾರಕ್ಕೆ ಊರ ಹೊರಗಿನಿಂದ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.
ರಥೋತ್ಸವ ಸಂದರ್ಭದಲ್ಲಿ ರಥಕ್ಕೆ ಸನ್ನೆ ಹಾಕುವವರು ಸಾರ್ವಜನಿಕರಿಗೆ ಮುಜುಗರ ತರುವಂತಹ ಅರೆಬರೆ ಬಟ್ಟೆಗಳನ್ನು ತೊಟ್ಟು ಮೇಲಕ್ಕೆದ್ದು ಸೆಡ್ಡು ಹೊಡೆಯುವುದಾಗಲಿ ಮಾಡಬಾರದು. ಈ ರೀತಿ ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಗರಿ ಬೊಮ್ಮನಹಳ್ಳಿ ಸಿಪಿಐ ಮಂಜಣ್ಣ, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತಪ್ಪ ತಳವಾರ್ ಹಾಗೂ ಸಿಬ್ಬಂದಿಗಳು,  ಉಪತಹಶಿಲ್ದಾರ್  ನಾಗರಾಜ್,  ಊರಿನ ಮುಖಂಡರಾದ ಎನ್ ಸತ್ಯನಾರಾಯಣ,  ಚಿದ್ರಿ ಸತೀಶ್, ಬುಡೇನ್ ಸಾಬ್,  ಎಲ್ ನಾಗರಾಜ್ , ಗೋವಿಂದರ ಪರಶುರಾಮ್, ಉದ್ದೇಕಲ್ ವೆಂಕಟೇಶ್, ತಳವಾರ ಹುಲಗಪ್ಪ, ಬ್ಯಾಲಕುಂದಿ ರಮೇಶ್, ರವಿಕಿರಣ,‌ ಈಡಿಗರ ನಾಗರಾಜ್, ಬದ್ರಿನಾಥ್, ಬಂಗಾರಿ ಮಂಜುನಾಥ, ಮರಡಿ ಹನುಮಂತ, ಗರಗ ಪ್ರಕಾಶ್, ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಇತರರು ಇದ್ದರು.