ಮರಿಯನ್ ಬಯೋಟೆಕ್ ಪರವಾನಗಿ ರದ್ದು

ನೊಯ್ಡಾ,ಮಾ.೨೩- ಉಜ್ಬೇಕಿಸ್ತಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಹಲವು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ನೋಯ್ಡಾ ಮೂಲದ ಔಷಧೀಯ ತಯಾರಿಕಾ ಸಂಸ್ಥೆ ’ಮರಿಯನ್ ಬಯೋಟೆಕ್’ ಪರವಾನಗಿಯನ್ನು ಉತ್ತರ ಪ್ರದೇಶದ ಸರ್ಕಾರ ರದ್ದು ಮಾಡಿದೆ.
ಕೆಮ್ಮಿನ ಸಿರಪ್ ಡಾಕ್-೧ ಅನ್ನು ಮರಿಯನ್ ಬಯೋಟೆಕ್ ಸಂಸ್ಥೆ ತಯಾರಿಸಿತ್ತು. ಈ ಕೆಮ್ಮಿನ ಸಿರಪ್ ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ ೧೮ ಮಕ್ಕಳು ಸಾವನ್ನಪ್ಪಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ’ಮರಿಯನ್ ಬಯೋಟೆಕ್’ನ ಉತ್ಪಾದನಾ ಪರವಾನಗಿ ರದ್ದುಗೊಳಿಸಲಾಗಿದೆ.
ಕೆಮ್ಮಿನ ಸಿರಪ್ ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ ೧೮ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ೨೦೨೨ ಡಿಸೆಂಬರ್‌ನಲ್ಲಿ ಕೇಂದ್ರ ಮತ್ತು ರಾಜ್ಯ ನಾರ್ಕೋಟಿಕ್ಸ್ ಅಧಿಕಾರಿಗಳ ತನಿಖೆಗೆ ಸೂಚನೆ ನೀಡಿತ್ತು.
“ಸಂಸ್ಥೆ ಪರವಾನಗಿಯನ್ನು ಜನವರಿಯಿಂದ ಅಮಾನತುಗೊಳಿಸಲಾಗಿದೆ ಮತ್ತು ನಂತರ ವಿವರವಾದ ವಿಚಾರಣೆ ಪ್ರಾರಂಭಿಸಲಾಯಿತು. ಇದೀಗ ಸಂಸ್ಥೆಯ ಪರವಾನಿಗೆಯನ್ನು ಉತ್ತರ ಪ್ರದೇಶದ ಔಷಧ ನಿಯಂತ್ರಣ ಪರವಾನಗಿ ಪ್ರಾಧಿಕಾರ ರದ್ದುಗೊಳಿಸಿದೆ. ಸಂಸ್ಥೆ ಇನ್ನು ಮುಂದೆ ಸಿರಪ್ ತಯಾರಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಔಷಧ ಅಧಿಕಾರಿಗಳು ತಪಾಸಣೆ ನಡೆಸಿದ ನಂತರ ಜನವರಿಯಲ್ಲಿ ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
ಈ ವರ್ಷದ ಜನವರಿ ೧೨ ರಂದು, ವಿಶ್ವ ಆರೋಗ್ಯ ಸಂಸ್ಥೆ ಉಜ್ಬೇಕಿಸ್ತಾನ್‌ನಲ್ಲಿ ಗುರುತಿಸಲ್ಪಟ್ಟ ಮತ್ತು ೨೦೨೨ರ ಡಿಸೆಂಬರ್ ೨೨, ರಂದು ವರದಿ ಮಾಡಲಾದ ಎರಡು ಕಲುಷಿತ ಸಿರಪ್ ಸೇವಿದಂತೆ ’ವೈದ್ಯಕೀಯ ಉತ್ಪನ್ನ ಎಚ್ಚರಿಕೆ’ ನೀಡಿತ್ತು.
ನೋಯ್ಡಾ ಪೊಲೀಸರು ಮರಿಯನ್ ಬಯೋಟೆಕ್‌ನ ಮೂವರು ಉದ್ಯೋಗಿಗಳನ್ನು ಸೆಕ್ಟರ್ ೬೭ ರಲ್ಲಿನ ಕಚೇರಿಯಿಂದ ಬಂಧಿಸಿದ್ದರು, ಅವರೆಲ್ಲರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಅದರ ಇಬ್ಬರು ನಿರ್ದೇಶಕರಿಗೆ ಲುಕ್‌ಔಟ್ ನೋಟಿಸ್ ನೀಡಲಾಯಿತು.
ಮೇರಿಯನ್ ಬಯೋಟೆಕ್‌ನ ಔಷಧಗಳ ಮಾದರಿಯು ಗುಣಮಟ್ಟದಿಂದ ಕೂಡಿಲ್ಲ ಎಂದು ಕಂಡುಬಂದಿದೆ
ಮರಿಯನ್ ಬಯೋಟೆಕ್‌ನ ಔಷಧಿಗಳ ಮಾದರಿಗಳು “ಕಲಬೆರಕೆ” ಮತ್ತು ಗುಣಮಟ್ಟವಲ್ಲ” ಎಂದು ತನಿಖೆಯು ಕಂಡುಹಿಡಿದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.