ಮರಾಠ ಸಮುದಾಯದ ಅಭಿವೃದ್ಧಿ ಪ್ರಾಧಿಕಾರ ರದ್ದತಿಗೆ ಒತ್ತಾಯ

ಗಂಗಾವತಿ ನ.20: ಮರಾಠ ಸಮುದಾಯದ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ನೇತೃತ್ವದಲ್ಲಿ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಆದೇಶ ಹೊರಡಿಸಿ ಐವತ್ತು ಕೋಟಿ ಹಣವನ್ನು ಮೀಸಲಿಟ್ಟಿರುವುದು ಇಡೀ ನಾಡಿನ ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ ಐದು ಕೋಟಿ, ಆದರೆ ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ಏಕೆ? ತಮಿಳರ, ಮಲಯಾಳರ, ತೆಲುಗರ, ಮಾರ್ವಾಡಿಗಳ, ಗುಜರಾತಿಗಳ ಹಾಗೂ ಇತರರ ಅಭಿವೃದ್ಧಿ ಪ್ರಾಧಿಕಾರ ಯಾವಾಗ? ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಲಹೆಗಳನ್ನು ಎಷ್ಟು ಅನುಷ್ಠಾನಗೊಳಿಸಿದ್ದೀರಿ? ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಪ್ರವಾಹ ಪೀಡಿತರಿಗೆ ಎಷ್ಟು ಹಣ ಬಿಡುಗಡೆಗೊಳಿಸಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಕೂಡಲೇ ನಾಡಿನ ಹಿತಕ್ಕೆ ಧಕ್ಕೆ ತರುವ ನಿಮ್ಮ ಆದೇಶವನ್ನು ಹಿಂಪಡೆದುಕೊಳ್ಳಿ, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರುಗಳಾದ ಖಾಜಾವಲಿ, ಶಂಕರ ಪೂಜಾರಿ, ಹುಸೇನಸಾಬ್, ಉಮೇಶ್, ಭರಮಪ್ಪ, ಶರಣು ನಾಯಕ, ಅಂಜಿ ಪೂಜಾರಿ, ಹಸೇನಸಾಬ್ ಮುದುಗಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.