ಮರಾಠ ಮೀಸಲಾತಿ ಕಿಚ್ಚು:೨ ಜಿಲ್ಲೆಗಳಲ್ಲಿ ಕರ್ಫ್ಯೂ

ಮುಂಬೈ, ಅ. ೩೧- ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆದಿರುವ ಹೋರಾಟ ಹಿಂಸಾರೂಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಧರಾಶಿವ್ ಮತ್ತು ಬೀಡ್ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.ಮಹಾರಾಷ್ಟ್ರದ ವಿವಿಧೆಡೆ ಮರಾಠ ಸಮುದಾಯವನ್ನು ಓಬಿಸಿಗೆ ಸೇರಿಸಿ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ವಿವಿಧೆಡೆ ಧರಣಿ, ಉಪವಾಸ ಸತ್ಯಾಗ್ರಹಗಳು ನಡೆಯುತ್ತಿವೆ.ನಿನ್ನೆ ಮಹಾರಾಷ್ಟ್ರದ ಬೀಡ್ ಮತ್ತು ಧರಾಶಿವ್ ಜಿಲ್ಲೆಗಳಲ್ಲಿ ಈ ಹೋರಾಟ ಹಿಂಸಾಚಾರಕ್ಕೆ ತಿರುಗಿ ಒಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು. ಹಾಗೆಯೇ ಬೀಡ್‌ನಲ್ಲಿರುವ ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕಿ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಲಾಗಿತ್ತು. ಹಾಗೂ ಮತ್ತೊಬ್ಬ ಶಾಸಕರ ಕಚೇರಿ ಮೇಲೂ ದಾಳಿ ನಡೆಸಲಾಗಿತ್ತು.ಈ ಹಿನ್ನೆಲೆಯಲ್ಲಿ ಇಂದು ಬೀಡ್ ಮತ್ತು ಧರಾಶಿವ್ ಜಿಲ್ಲೆಗಳಲ್ಲಿ ಕೆಲವಡೆ ಕರ್ಫ್ಯೂ ಜಾರಿ ಮಾಡಿ ಇನ್ನೂ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಾಗೆಯೇ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಅವಶ್ಯ ವಸ್ತುಗಳಾದ ಹಾಲು, ಔಷಧಿ ಅಂಗಡಿ, ಬ್ಯಾಂಕ್, ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಚೇರಿಗಳು ಬಂದ್ ಆಗಿವೆ.
ಮೀಸಲಾತಿ ಹೋರಾಟ ಇಂದು ಮುಂದುವರೆದಿರುವುದರಿಂದ ಯಾವುದೇ ಅಹಿತಕರ ಘಟನೆಗಳಾಗದಂತೆ ಬಿಗಿ ಪೊಲೀಸ್ ಬಂದೋ ಬಸ್ತ್‌ನ್ನು ಪೊಲೀಸರು ನಡೆಸಿದ್ದಾರೆ.
ನಿನ್ನೆಯೆ ಹಿಂಸಾಚಾರ ಸಂದರ್ಭದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗೆ ಬೆಂಕಿ ಹಚ್ಚಿರುವುದರಿದ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್‌ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಬೀದರ್ ಜಿಲ್ಲೆಯ ಬಾಲ್ಕಿಯಿಂದ ಪುಣೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಮಹಾರಾಷ್ಟ್ರದ ಉಮರ್ಗಾ ಬಳಿ ಪ್ರತಿಭಟನಾಕಾರರು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್‌ಗೆ ಬೆಂಕಿ ಹಚ್ಚಿದ್ದರು.ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸ್ಥಳೀಯ ಪೊಲೀಸರು ಪರ್ಯಾಯ ವ್ಯವಸ್ಥೆ ಮಾಡಿ ಅವರನ್ನು ಸುರಕ್ಷಿತವಾಗಿ ಕಳುಹಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಧರಾಶಿವ್ ಮತ್ತು ಬೀಡ್ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿ ಕಟ್ಟೆಚ್ಚರ ವಹಿಸಲಾಗಿದೆ.