ಮರಾಠ ನಿಗಮ ಎಸ್‌ಟಿಎಸ್ ಸಮರ್ಥನೆ


ಹೊಸಪೇಟೆ,ನ. ೧೯- ಮರಾಠಿ ಗಡಿ-ಭಾಷೆ ವಿಷಯ ಬೇರೆ ,ಮರಾಠ ಅಭಿವೃದ್ಧಿ ನಿಗಮವೇ ಬೇರೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ

ರಾಜ್ಯದಲ್ಲಿರುವ ಮರಾಠಿಗರು ಕನ್ನಡಿಗರೇ. ಹಾಗಾಗಿ ಅವರ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ

ಕರ್ನಾಟಕದಲ್ಲಿ ಮರಾಠಿಗರು ಅನೇಕ ವರ್ಷಗಳಿಂದ ವಾಸವಾಗಿದ್ದಾರೆ. ಇಲ್ಲಿಯೇ ಹುಟ್ಟಿ, ಬೆಳದವರಿದ್ದಾರೆ. ಅವರೂ ಕನ್ನಡಿಗರೇ ಆಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಮರಾಠ ಸಮುದಾಯ ನಿಗಮಕ್ಕೆ ಆದೇಶ ಹೊರಡಿಸಿದ್ದಾರೆ ಎಂದರು.

ಅಭಿವೃದ್ಧಿ ನಿಗಮವನ್ನು ಮಹಾರಾಷ್ಟ್ರದವರಿಗಾಗಿ ಮಾಡುತ್ತಿರುವುದಲ್ಲ. ನಮ್ಮಲ್ಲಿರುವ ಮರಾಠಿಗರಿಗಾಗಿ ಎನ್ನುವುದನ್ನು ವಿರೋಧಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ ಅವರುಅನೇಕ ವರ್ಷಗಳ ಬೇಡಿಕೆಯನ್ನು ಈಗ ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಜಾತಿಗೊಂದು ನಿಗಮ ಮಂಡಳಿ ನಮ್ಮ ಸರ್ಕಾರ ಮಾಡುತ್ತಿಲ್ಲ. ಇದು ಎಲ್ಲ ಸರ್ಕಾರವಿದ್ದಾಗಲೂ ರಚನೆಯಾಗುವ ಸಾಮಾನ್ಯ ಪ್ರಕ್ರಿಯೆ. ಸವಿತಾ ಸಮಾಜ, ಬ್ರಾಹ್ಮಣ ಸಮಾಜ ಸೇರಿದಂತೆ ಎಲ್ಲ ಸಮಾಜದವರೂ ಸಹ ನಿಗಮ ಮಂಡಳಿ ಕೇಳುತ್ತಲೇ ಬಂದಿದ್ದಾರೆ. ಎಲ್ಲ ಜಾತಿಯವರು ಅವರ ಸಮಾಜದ ಏಳ್ಗೆಗೆ ಕೇಳುತ್ತಾ ಇರುತ್ತಾರೆ. ಈಗ ಮುಖ್ಯಮಂತ್ರಿಗಳ ಬಳಿ ಹೋಗಿ ಮನವಿ ಸಲ್ಲಿಸಿದ್ದಾರೆ.

ಪರ ವಿರೋದ ಸಹಜ:

ವಿಜಯಪುರವನ್ನು ಹೊಸ ಜಿಲ್ಲೆಯಾಗಿ ಮಾಡುವ ಬಗ್ಗೆ ಪರ-ವಿರೋಧ ಇರುವುದು ಸಹಜ. ಈಗಾಗಲೇ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಹಾಗೂ ಈ ಭಾಗದ ಅನೇಕ ಶಾಸಕರು ನೂತನ ಜಿಲ್ಲೆಯ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ ಎಂದರು.

ಸಚಿವ ಆನಂದ್ ಸಿಂಗ್ ಅವರು ಬಹಳ ಮೊದಲಿನಿಂದಲೇ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರ ಜೊತೆ ಅನೇಕ ಶಾಸಕರು ಹಾಗೂ ಸಂಘ-ಸಂಸ್ಥೆಗಳ ಬೆಂಬಲವಿತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದರು

ಶಾಸಕರಾದ ಸೋಮಶೇಖರ್ ರೆಡ್ಡಿ ಅವರು ನೂತನ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೋಮಶೇಖರ ರೆಡ್ಡಿ ಅವರ ಜೊತೆ ನಾವೆಲ್ಲರೂ ಮಾತನಾಡುತ್ತೇವೆ. ಅವರೂ ಸಹ ನಮ್ಮ ಪಕ್ಷದವರೇ ಆಗಿರುವುದರಿಂದ ಖಂಡಿತವಾಗಿ ಮನವೊಲಿಸುತ್ತೇವೆ. ಮುಖ್ಯಮಂತ್ರಿಗಳು ಏನು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅದನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದರು.

ಪರಮಾಧಿಕಾರ
ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಸೋಮಶೇಖರ್ ತಿಳಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಬಂದಿದ್ದಾರೆ.ಹೈಕಮಾಂಡ್ ಅನುಮತಿ ಕೊಡುವ ಪದ್ಧತಿ ಇದೆ. ಹೀಗಾಗಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ ಎಂದು ತಿಳಿಸಿದರು