ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ಧತಿಗೆ ಆಗ್ರಹ

ಕೋಲಾರ,ನ.೨೧-ಮರಾಠಾ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕ.ರ.ವೇ. ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶೆಟ್ಟಿಹಳ್ಳಿ ರಮೇಶ್, ಮರಾಠಿಗರನ್ನು ಓಲೈಸಿಕೊಳ್ಳಲು ಹಾಗೂ ಅವರ ಮತ ಬೇಟೆಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿರುವುದು ಖಂಡನೀಯ ಎಂದರು.
ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ನಿರ್ಧಾರದ ಬಗ್ಗೆ ಮರಾಠಿಗರು ರಾಜ್ಯದಲ್ಲಿ ಸ್ವಾಗತಿಸಿಲ್ಲ, ವಿಜಯೋತ್ಸವ ಆಚರಣೆ ಮಾಡಿಲ್ಲ, ಸರ್ಕಾರ ಮರಾಠಿಗರ ಹಲವಾರು ಬೇಡಿಕೆಗಳನ್ನು ಈಡೇರಿಸಿರುವಾಗ ಪ್ರಾಧಿಕಾರದ ಅವಶ್ಯಕತೆ ಏನಿದೆ? ಮರಾಠಿಗರಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲದಿರುವಾಗ ಮುಖ್ಯಮಂತ್ರಿಗಳು ಏಕೆ ಇದರ ಬಗ್ಗೆ ಆಸಕ್ತಿ ಹೊಂದಿದ್ದಾರೆಂದು ಪ್ರಶ್ನಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ಮೀಸಲಿಟ್ಟಿರುವ ೫೦ ಕೋಟಿ ರೂಗಳನ್ನು, ಕಷ್ಟದಲ್ಲಿರುವ ರೈತರಿಗೆ, ಪ್ರವಾಹದಿಂದ ನೊಂದಿರುವರಿಗೆ, ಕೋವಿಡ್ ಪೀಡಿತರಿಗೆ ಪರಿಹಾರವಾಗಿ ವಿತರಿಸಬೇಕೆಂದು ಅವರು ಆಗ್ರಹಿಸಿದರು.
ಕ.ರ.ವೇ.ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡರ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಂಕೇತಿಕವಾಗಿ ಸರ್ಕಾರದ ಗಮನ ಸೆಳೆಯಲು ಮನವಿ ಸಲ್ಲಿಸುತ್ತಿದ್ದು, ಸರ್ಕಾರ ಪ್ರಾಧಿಕಾರ ರಚನೆಯ ಬಗ್ಗೆ ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುಬೇಕು, ಒಂದು ವೇಳೆ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಮುಂದಾದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ.ಸಿ.ವಿ. ಸ್ನೇಹರವರು ಮನವಿಯನ್ನು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಕಳುಹಿಸುವುದಾಗಿ ತಿಳಿಸಿದರು.
ನಿಯೋಗದಲ್ಲಿ ಉಪಾಧ್ಯಕ್ಷರುಗಳಾದ ರಾಜೇಶ್, ಜನ್ನಘಟ್ಟ ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಲ್ಲಂಬಳ್ಳಿ ಶಿವು, ಕಾರ್ಯದರ್ಶಿ ಚಲಪತಿ, ಜಿಲ್ಲಾ ಯುವ ಘಟಕದ ಮನೋಜ್ ಕುಮಾರ್, ತಾಲೂಕು ಅಧ್ಯಕ್ಷ ರಾಜೇಶ್ ಇದ್ದರು.