ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ

ಮೈಸೂರು, ನ.19: ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಕೊಚ್ಚಿಹೋಗಿರುವ, ಅತಿ ಮಳೆಯಿಂದ ಬೆಳೆ ನಾಶವಾಗಿರುವವರಿಗೆ ಪರಿಹಾರ ನೀಡದೆ, ರೈತರಿಗೆ ಸರ್ಕಾರ ನೆರವು ನೀಡದೆ ಮತ ಬೇಟೆಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಮರಾಠಿಗರನ್ನು ಒಲಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಮರಾಠಿಗರು ಎಲ್ಲೂ ಕೂಡ ಸ್ವಾಗತಿಸಿಲ್ಲ. ಪ್ರಾಧಿಕಾರ ರಚನೆಗೆ ಎಲ್ಲೂ ವಿಜಯೋತ್ಸವ ಆಚರಿಸಿದ್ದು ಕಂಡು ಬಂದಿಲ್ಲ. ಇದರಿಂದ ಮರಾಠಿಗರಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಈ ಕೂಡಲೇ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ 50ಕೋಟಿ ಹಣವನ್ನು ಪ್ರವಾಹ ಪೀಡಿತರಿಗೆ ಮತ್ತು ಉತ್ತರ ಕರ್ನಾಟಕದ ನೊಂದ ರೈತರಿಗೆ ನೀಡುವ ಮೂಲಕ ರಾಜ್ಯದ ಹಿತವನ್ನು ಕಾಪಾಡಬೇಕು. ಮರಾಠಿಗರ ಪ್ರಾಧಿಕಾರವನ್ನು ರಚನೆ ಮಾಡಿದ್ದೇ ಆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಮರಾಠಿಗರ ಬೇಡಿಕೆಗಳನ್ನು ಸರ್ಕಾರ ಪರಿಶೀಲನೆ ಮಾಡಿ ಬೇಡಿಕೆಗಳನ್ನು ಈಡೇರಿಸಲಿ, ಪ್ರಾಧಿಕಾರವನ್ನು ಯಾವುದೇ ಕಾರಣಕ್ಕೂ ರಚಿಸಬಾರದೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ, ಜಗದೀಶ್ ಎಂ, ಹರೀಶ್, ಸಚಿನ್, ಸ್ವಾಮಿಗೌಡ, ಚಂದನ್, ರಮೇಶ್, ಶೀತಲ್ ಮತ್ತಿತರರು ಪಾಲ್ಗೊಂಡಿದ್ದರು.