ಮರಾಠ ಅಭಿವೃದ್ಧಿ ನಿಗಮ ಆರಂಭದ ವಿರುದ್ಧ ಕರವೇ ಆಕ್ರೋಶ

ಲಿಂಗಸುಗೂರು.ನ.೧೯- ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಮರಾಠಿಗರ ಮೇಲೆ ಚುನಾವಣೆಯ ಓಲೈಕೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ಆದೇಶವನ್ನು ನೀಡಿರುವುದು ಖಂಡನೀಯ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಶಿರಸ್ತೆದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ರಾಜಕೀಯ ಲಾಭಕ್ಕಾಗಿ ಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲಲು ಮತದಾರರಿಗೆ ಆಮಿಷಗಳನ್ನು ನೀಡುವುದನ್ನು ಕಂಡು, ಕೇಳಿದ್ದೇವೆ. ಆದರೆ, ಕನ್ನಡಿಗರ ನಾಡಿನ ಹಿತವನ್ನೇ ಬಲಿ ಕೊಡಲು ಹೊರಟಿರುವ ಮುಖ್ಯಮಂತ್ರಿಗಳ ಕ್ರಮ ಖಂಡನೀಯವಾಗಿದೆ. ಪ್ರಬುದ್ಧ ರಾಜಕಾರಣಿ ಎಂದೆನಿಸಿಕೊಂಡಿರುವ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕನ್ನಡಿಗರ ವಿಶ್ವಾಸಕ್ಕೆ ದ್ರೋಹ ಬಗೆಯುವಂಥಹ ಕಾರ್ಯಕ್ಕೆ ಕೈ ಹಾಕುತ್ತಿರುವದು ವಿಶಾದನೀಯ.
ನ.೧೩, ೨೦೨೦ ರಂದು ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ರಾಜ್ಯದಲ್ಲಿ ಮರಾಠ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಸಮಾಜದ ಆರ್ಥಿಕ, ಸಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿ ಇತ್ಯಾದಿಗಾಗಿ ’ಮರಾಠ ಅಭಿವೃದ್ಧಿ ಪ್ರಾಧಿಕಾರ’ ವನ್ನು ಸ್ಥಾಪಿಸುವುದು ಹಾಗೂ ಸದರಿ ಪ್ರಾಧಿಕಾರಕ್ಕೆ ೫೦ ಕೋಟಿ ರೂಪಾಯಿ ಅನುದಾನವನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಮೀಸಲಿಡುವಂತೆ ಆದೇಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದೀಗ ರಾಜ್ಯವ್ಯಾಪಿ ಚರ್ಚೆಯ ವಿಷಯವಾಗಿದೆ. ಒಂದು ಸಮುದಾಯದ ಮತಗಳನ್ನು ಪಡೆಯಲು ಇಷ್ಟೊಂದು ಕೀಳು ಮಟ್ಟದ ರಾಜಕೀಯಕ್ಕೆ ಇಳಿಯುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಮುಖ್ಯಮಂತ್ರಿಗಳು ಧಕ್ಕೆ ತಂದಿರುವುದು ಬೇಸರದ ಸಂಗತಿಯಾಗಿದೆ.
ಸಾರಿಗೆ ಇಲಾಖೆ ನಷ್ಟದಲ್ಲಿದೆ, ಸಾರಿಗೆ ನೌಕರರಿಗೆ ವೇತನ ಕೊಡುವಂತೆ ಆರ್ಥಿಕ ಇಲಾಖೆಗೆ ಮೊರೆ ಹೋದ ಕಡತವನ್ನು ರಿಜೆಕ್ಟ್ ಮಾಡಲಾಗಿದೆ ಎಂದು ಖುದ್ದು ಸಾರಿಗೆ ಸಚಿವರೇ ಹೇಳಿಕೊಂಡಿದ್ದಾರೆ. ಆರ್ಥಿಕ ಬಿಕ್ಕಟ್ಟು ಇದೆ ಎಂದು ಸಂಬಳ ಕೊಡಲು ಹಿಂದೇಟು ಹಾಕುತ್ತಿರುವ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೋಟಿಗಟ್ಟಲೇ ದುಡ್ಡು ಮಂಜೂರು ಮಾಡಲು ಹೊರಟ ಕ್ರಮ ಖಂಡನೀಯ. ಕೂಡಲೇ ಮುಖ್ಯಮಂತ್ರಿಗಳು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಕನ್ನಡಿಗರ ಶ್ರೇಯೋಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕೆ ಹೊರತು ಅನ್ಯರನ್ನು ಓಲೈಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡಿಗರ ದುಡ್ಡನ್ನು ಪೋಲು ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ತಾಕೀತು ಮಾಡಬೇಕು.
ಸರಕಾರ ನಿರ್ಧಾರವನ್ನು ಬದಲಿಸದೇ ಇದ್ದರೆ, ಕರವೇ ಸಂಘಟನೆ ರಾಜ್ಯವ್ಯಾಪಿ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಮುಖ್ಯಮಂತ್ರಿಗಳ ಸ್ವಾರ್ಥದ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಅದ್ಯಕ್ಷ ಜಿಲಾನಿಪಾಷಾ, ಉಪಾದ್ಯಕ್ಷ ಚಂದ್ರು ನಾಯಕ, ಪ್ರದಾನ ಕಾರ್ಯದರ್ಶಿ ಶಿವರಾಜ ನಾಯ್ಕ, ಖಜಾಂಚಿ ಅಜೀಜಪಾಷಾ, ಮುಖಂಡರಾದ ರವಿಕುಮಾರ ಬರಗೂಡಿ, ಹನುಮಂತ ನಾಯಕ, ಅಲ್ಲಾವುದ್ದೀನ್ ಬಾಬಾ, ಎಂ.ಜಿಲಾನಿ, ವೆಂಕಟೇಶ ಉಪ್ಪಾರ, ಶೌಕತಲಿ, ಜಮೀರ್‌ಖಾನ್, ಇರ್ಫಾನ್, ತಿಮ್ಮಾರೆಡ್ಡಿ, ಮಹೆಬೂಬ ಸೇರಿ ಇತರರು ಇದ್ದರು.