ಮರಾಠಿಗರಿಗೆ 3ಬಿ, 2ಎಗೆ ಸೇರಿಸಲು ಸಿಎಂಗೆ ಮುಳೆ ಮನವಿ

ಬೆಂಗಳೂರು, ಜು.೧೯- ಮರಾಠ ಸಮುದಾಯವನ್ನು ಪ್ರವರ್ಗ ೩ಬಿ ಪ್ರವರ್ಗ ೨ಎಗೆ ಸೇರ್ಪಡೆ ಮಾಡುವಂತೆ ಮರಾಠ ಸಮುದಾಯದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಕಚೇರಿ ಮತ್ತು ಉದ್ಘಾಟನೆ ಮತ್ತು ಲಾಂಛನ ಅನಾವರಣ ನೆರವೇರಿಸಿದ ಸಂದರ್ಭದಲ್ಲಿ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಜಿ ಮುಳೆ ಅವರು ಮುಖ್ಯಮಂತ್ರಿಗಳಿಗೆ ಮರಾಠ ಸಮುದಾಯದ ಪರವಾಗಿ ಮನವಿ ಸಲ್ಲಿಸಿ ಮರಾಠ ಸಮಾಜವನ್ನು ೩ಬಿಯಿಂದ ೨ಎಗೆ ಸೇರಿಸಲು ಮನವಿ ಮಾಡಿದರು.
೨೦೧೮ರ ಚುನಾವಣಾ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮರಾಠ ಸಮುದಾಯವನ್ನು ೩ಬಿಯಿಂದ ೨ಎಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಈಡೇರಿಲ್ಲ. ಆದಷ್ಟು ಶೀಘ್ರ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು. ಹಿಂದುಳಿದ ವರ್ಗಗಳ ಆಯೋಗವೂ ಸಹ ೨ಎಗೆ ಮರಾಠಿ ಸಮುದಾಯವನ್ನು ಸೇರಿಸುವಂತೆ ಶಿಫಾರಸ್ಸು ಮಾಡಿದೆ ಎಂದು ಎಂ.ಜಿ ಮುಳೆ ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ನಗಮದ ಅಂತರ್ಜಾಲ ತಾಣವನ್ನು ಬಿಡುಗಡೆ ಮಾಡಿದರು.
ಲಕ್ಷ್ಮಣಸವದಿ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣಸವದಿ ಅವರು ಮರಾಠಿ ಸಮುದಾಯಕ್ಕೆ ನಿಗಮ ಆಗಬೇಕು ಎಂಬ ಬೇಡಿಕೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಡೇರಿಸಿದ್ದಾರೆ. ಈ ಸರ್ಕಾರ ನಿಗಮಕ್ಕೆ ೩ ಕೋಟಿ ರೂ. ಒದಗಿಸಿದೆ. ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರೆಯಬೇಕು. ನಿಮ್ಮ ಜತೆ ಮುಖ್ಯಮಂತ್ರಿ ಬೊಮ್ಮಾಯಿ, ಯಡಿಯೂರಪ್ಪ ಇದ್ದಾರೆ. ನಿಮ್ಮ ಭರವಸೆ ಈಡೇರಿಸುವ ಕೆಲಸ ಮಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಭವಾನಿ ದತ್ತಪೀಠದ ಮಂಜುನಾಥ ಭಾರತಿ ಸ್ವಾಮೀಜಿ, ಸಚಿವರುಗಳಾದ ಡಾ. ಸಿ.ಎನ್ ಅಶ್ವತ್ಥನಾರಾಯಣ, ಶಶಿಕಲಾ ಜೊಲ್ಲೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಮರಾಠ ಸಮುದಾಯದ ಮುಖಂಡರುಗಳಾದ ವಿ. ಲಕ್ಷ್ಮಿಕಾಂತ್‌ರಾವ್, ಬಿ. ಶಂಕರ್‌ರಾವ್ ಸಿ.ಎಸ್ ಸೂರ್ಯಕಾಂತ್‌ರಾವ್, ಕೆ. ಸತ್ಯರಾವ್, ಎಂ. ರವಿ, ಶ್ರೀನಿಧಿ ಪಿ. ಗಾಯಕ್‌ವಾಡ್, ಯಶವಂತರಾವ್‌ಬಾರೆ, ಎ. ಮನೋಹರ್‌ರಾವ್, ಆರ್. ರಮೇಶ್‌ರಾವ್, ಭಂಡಾರಿ ಜೆ. ನಾಗರಾಜ್ ಉಪಸ್ಥಿತರಿದ್ದರು.