ಮರಾಠಾ ಜಾಗೃತಿ ಸಮಾವೇಶ


ಧಾರವಾಡ,ಮಾ.3: ಮರಾಠರು ಹಿಂದೂಗಳೇ ವಿನಃ ಹಿಂದುತ್ವವಾದಿಗಳಲ್ಲ. ಆದರೆ, ಇಂದು ಸಮಾಜದಲ್ಲಿ ವ್ಯವಸ್ಥಿತವಾಗಿ ಮರಾಠರು ಮುಸ್ಲಿಂ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿಯ ಮರಾಠಾ ವಿದ್ಯಾ ಪ್ರಸಾರಕ ಮಂಡಳದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ನಡೆದ ಮರಾಠಾ ಜಾಗೃತಿ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ದೇಶಕ್ಕೆ ಮೀಸಲಾತಿ ಕೊಟ್ಟ ಸಮಾಜ ನಮ್ಮದಾಗಿದೆ. ಆದರೆ, ಇಂದು ನಾವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅಲ್ಲದೇ ಊಳುವವರಿಗೆ ಭೂಮಿ ನೀಡಿದ ಸಮಾಜ ನಮ್ಮದು. ಆದರೆ, ನಮಗೆ ಇಂದು ಜಾಗೆ ನೀಡುವಂತೆ ಸರಕಾರವನ್ನು ಕೇಳುವ ಪರಿಸ್ಥಿತಿ ಸಮಾಜಕ್ಕೆ ಬಂದೊದಗಿದೆ ಎಂದರು.
ಬಡವರಿಗೆ, ತೊಂದರೆಯಲ್ಲಿ ಇರುವವರಿಗೆ ಸಹಾಯ ಮಾಡುವವರೇ ಛತ್ರಪತಿ. ಆ ಕೆಲಸವನ್ನು ಶಿವಾಜಿ ಮಹಾರಾಜರು ಮಾಡಿದರು. ಅದಕ್ಕಾಗಿಯೇ ಅವರನ್ನು ಛತ್ರಪತಿ ಎಂದು ಕರೆಯಲಾಗುತ್ತದೆ. ಶಿವಾಜಿ ಮಹಾರಾಜರು ಅಷ್ಟೊಂದು ಬೆಳೆಯಲು ತಾಯಿ ಜೀಜಾಮಾತಾ ಕಾರಣ. ಆದ್ದರಿಂದ ಪ್ರತಿಯೊಂದು ಕಾರ್ಯಕ್ರಮದಲ್ಲಿ ನಾವು ಮಹಿಳೆಯರಿಗೆ ವಿಶೇಷ ಗೌರವ ನೀಡುತ್ತೇವೆ ಎನ್ನುವುದನ್ನು ಸಮಾಜದ ಬಾಂಧವರು ಅರಿತುಕೊಳ್ಳಬೇಕು ಎಂದರು.
ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಆಗಬೇಕು. ಅಲ್ಲದೇ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ಸಮಾಜ ಒಗ್ಗಟ್ಟಾದಾಗ ಮಾತ್ರ ಅದರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಬೆಂಗಳೂರು ಗೋಸಾವಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು. ಉತ್ತಮ ಸಮಾಜವನ್ನು ಎಲ್ಲರೂ ಸೇರಿ ಕಟ್ಟೋಣ ಎಂದರು.
ಇದೇ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ಸಮಾಜದ ಸಾಧಕರಿಗೆ ಸನ್ಮಾನಿಸಲಾಯಿತು. ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಮೋರೆ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾನಂದ ಸ್ವಾಮೀಜಿ, ಅನೀಲ ಪಾಟೀಲ, ಡಾ. ಮಯೂರ ಮೋರೆ, ಶಂಕರ ಶೇಳಕೆ, ಸುಭಾಸ ಶಿಂಧೆ, ನಾರಾಯಣ ವೈದ್ಯ, ಗಣೇಶ ಕದಂ, ಸುನೀಲ ದಳವಿ, ಸಂಭಾಜಿ ಘೋಡಸೆ, ಭೀಮಪ್ಪ ಕಸಾಯಿ, ರಾಜು ಬಿರಜನ್ನವರ, ಬಸವಂತ ಮಾಲನವರ, ಬಸವರಾಜ ಜಾಧವ ಸೇರಿದಂತೆ ಇತರರು ಇದ್ದರು.

ಬಾಕ್ಸ್…
ಕುಡಿದು ಸಂಭ್ರಮಿಸದಿರಿ…
ಶಿವಾಜಿ ಜಯಂತಿ ಸೇರಿದಂತೆ ಇತರೆ ಮಹನೀಯರ ಜಯಂತಿ ಸಂದರ್ಭದಲ್ಲಿ ಡಿಜೆ ಹಾಡುಗಳಿಗೆ ಕುಡಿದು ಸಂಭ್ರಮಿಸಬಾರದು. ಇದು ಮಹನೀಯರಿಗೆ ಮಾಡುವ ಅಪಮಾನವಾಗಿದೆ. ದೇಶಪ್ರೇಮ ಹಾಗೂ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಎಂದು ಸಚಿವ ಲಾಡ್ ಸಭಿಕರಲ್ಲಿ ಮನವಿ ಮಾಡಿದರು.