ಮರಾಠಾ ಅಭಿವೃದ್ಧಿ ನಿಗಮಕ್ಕೆ ವಿರೋಧ

ಲಕ್ಷ್ಮೇಶ್ವರ,ನ21 ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಆದೇಶ ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಘಟಕ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ ಭ್ರಮರಾಂಬ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಸದಾನಂದ ನಂದೆಣ್ಣವರ ಮಾತನಾಡಿ ‘ರಾಜ್ಯದಲ್ಲಿ ಕನ್ನಡಿಗರಿಗೆ ಪ್ರಥಮ ಪ್ರಾಶಸ್ತ್ಯ ಇರಬೇಕು. ಮರಾಠಿ ಭಾಷಿಗರನ್ನು ಓಲೈಸುವ ಸಲುವಾಗಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಸರಿಯಾದ ಕ್ರಮವಲ್ಲ. ಇದರಿಂದಾಗಿ ಕನ್ನಡ ಮತ್ತು ಕನ್ನಡಿಗರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಮರಾಠಿಗರನ್ನು ಖುಷಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕೈಗೊಂಡಿದ್ದು ಇದು ಖಂಡನೀಯ. ಮುಂದೆ ಬೇರೆ ಬೇರೆ ಭಾಷಿಗರು ಪ್ರಾಧಿಕಾರ ರಚಿಸುವಂತೆ ಕೇಳಬಹುದು. ಕಾರಣ ಈಗಲೇ ಸರ್ಕಾರ ಪ್ರಾಧಿಕಾರ ರಚನೆಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರಲ್ಲದೆ ‘ಸರ್ಕಾರ ಕನ್ನಡಿಗರ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಸಮಿತಿಯ ಕುಮಾರ ಬೆಟಗೇರಿ, ಎನ್.ಎ. ನಂದೆಣ್ಣವರ, ಶಿವರಾಜ ಹರಿಜನ, ಪ್ರವೀಣ ಆಚಾರಿ, ಮಂಜುನಾಥ ಗೌರಿ, ಮಹಾಂತೇಶ ಗುಡಸಲಮನಿ, ಮಂಜುನಾಥ ಕೋಡಳ್ಳಿ, ಮಹಾಂತೇಶ ಕುಂಬಾರ, ರವಿ ಸವದತ್ತಿ, ಗಣೇಶ ಭಜಕ್ಕನವರ, ಹುಲ್ಲೇಶ ಗಡದವರ, ರಾಕೇಶ ಭೀಮಣ್ಣವರ ಇದ್ದರು.
**