ಮರಳು ಸಾಗಣೆ ತೆಪ್ಪಗಳ ವಶ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜೂ.10 : ತುಂಗಭದ್ರಾ ನದಿ ತೀರದ ಬ್ಯಾಲಹುಣ್ಸಿ ಬಳಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ, ಕಬ್ಬಿಣದ ಎರಡು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿರುವುದರಿಂದ ಮರಳು ದಂಧೆಕೋರರು ತೆಪ್ಪಗಳನ್ನು ಬಳಸಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಹಿರೇಹಡಗಲಿ ಪೊಲೀಸರು ನದಿ ತೀರದಲ್ಲಿ ದಾಳಿ ನಡೆಸಿದ್ದಾರೆ. ಪೋಲಿಸರು ಬರುವುದನ್ನು ಗಮನಿಸಿ ದಂಧೆಕೋರರು ತೆಪ್ಪಗಳನ್ನು ತೀರದಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಪೊಲೀಸರು ಮೀನುಗಾರರ ನೆರವು ಪಡೆದು ಎರಡು ತೆಪ್ಪಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.