ಮರಳು ದಿಬ್ಬ ತೆರವಿಗೆ ಜಿಪಿಎಸ್ ಕಡ್ಡಾಯ: ಡಿಸಿ

ಮಂಗಳೂರು, ನ.೨೧- ದ.ಕ. ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝೆಡ್) ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ೧೩ ಮರಳು ದಿಬ್ಬಗಳನ್ನು ತೆರವುಗೊಳಿಸಲು ೮೦ ಸಂಖ್ಯೆಯ ತಾತ್ಕಾಲಿಕ ಪರವಾನಿಗೆ ವಿತರಿಸಲಾಗಿದೆ. ಈ ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಹಾಗೂ ಮರಳು ಸಾಗಾಟ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸಿಆರ್‌ಝೆಡ್ ಸಮಿತಿ ಅಧ್ಯಕ್ಷ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

ತಾತ್ಕಾಲಿಕ ಪರವಾನಿಗೆದಾರರು ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಮತ್ತು ವಾಹನ ಮಾಲಕರು ಮತ್ತು ತಾತ್ಕಾಲಿಕ ಪರವಾನಿಗೆದಾರರು ಮರಳು ಸಾಗಾಟ ವಾಹನಗಳಿಗೆ ಕಿಯೋನಿಕ್ಸ್ ನಿಗದಿಪಡಿಸಿದ ಸಂಸ್ಥೆಯಿಂದ ಜಿಪಿಎಸ್ ಅಳವಡಿಸಿಕೊಳ್ಳಲು ಮುಂದಾಗಬೇಕು. ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಜಿಪಿಎಸ್ ಅಳವಡಿಸಿದ ಬಗ್ಗೆ ದಾಖಲೆಯನ್ನು ಮರಳು ತಾತ್ಕಾಲಿಕ ಪರವಾನಿಗೆದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದರು. ಮರಳು ದಿಬ್ಬಗಳನ್ನು ತೆರವುಗೊಳಿಸಿ ‘ಸ್ಯಾಂಡ್ ಬಝಾರ್ ಆಪ್’ ಮೂಲಕ ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮರಳು ಪೂರೈಕೆಯಾಗಲಿದೆ. ಮರಳು ಸಾಗಾಟ ಮಾಡುವ ವಾಹನಗಳನ್ನು ‘ಸ್ಯಾಂಡ್ ಬಝಾರ್ ಆಪ್’ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಮರಳು ಸಾಗಾಟ ನಡೆಸಲು ಬಯಸುವ/ ಇಚ್ಛಿಸುವ ವಾಹನಗಳ ಮಾಲಕರು/ ತಾತ್ಕಾಲಿಕ ಪರವಾನಿಗೆದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಲು ಜಿಲ್ಲಾಧಿಕಾರಿ ಹಾಗೂ ಸಿಆರ್‌ಝೆಡ್ ಸಮಿತಿ ಅಧ್ಯಕ್ಷ ಡಾ.ಕೆ.ವಿ. ರಾಜೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸ್ಯಾಂಡ್ ಬಝಾರ್ ಆಪ್

ದ.ಕ. ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ಮರಳು ಪೂರೈಕೆಗಾಗಿ ‘ಸ್ಯಾಂಡ್ ಬಝಾರ್ ಆಪ್’ನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅನಾವರಣಗೊಳಿಸಲಾದೆ. ಆಪ್’ನ ಸಹಾಯದಿಂದ ಮರಳನ್ನು ಪಡೆಯಲು ಗ್ರಾಹಕರು/ ಸಾರ್ವಜನಿಕರು ಬಳಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ೧ನೇ ಮಹಡಿ, ಜುಗುಲ್ ಬಿಲ್ಡಿಂಗ್, ಮಲ್ಲಿಕಟ್ಟೆ, ಮಂಗಳೂರು-೫೭೫೦೦೨ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.